ದೇವಾಸ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಶಿಪ್ರಾ ಗ್ರಾಮದಲ್ಲಿ ಮನೆ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿಪ್ರಾ ಗ್ರಾಮದ ಮನೆಯೊಂದರ ಮೇಲೆ ಪಾಕಿಸ್ತಾನದ ರಾಷ್ಟ್ರಧ್ವಜ ಹಾರಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿದ್ದ ಪೊಲೀಸರು ಧ್ವಜವಿದ್ದ ಮನೆಯನ್ನು ಪತ್ತೆಹಚ್ಚಿ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಫಾರೂಕ್ ಖಾನ್ ಎಂಬಾತನನ್ನು ಭಾನುವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 153 ಎ ಅಡಿ ಆರೋಪಿಯನ್ನು ಬಂಧಿಸಲಾಗಿದ್ದು, ಧ್ವಜವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಶರ್ಮಾ ಮಾಹಿತಿ ನೀಡಿದ್ದಾರೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ ತಹಶೀಲ್ದಾರ್ ಸೂಚನೆ ಮೇರೆಗೆ ಕಂದಾಯ ನಿರೀಕ್ಷಕ ಲಖನ್ ಸಿಂಗ್ ತನಿಖೆ ಕೈಗೊಂಡಿದ್ದರು. ಆಗ ಫಾರೂಕ್ ತನ್ನ 12 ವರ್ಷದ ಮಗ ಗೊತ್ತಿಲ್ಲದೇ ಪಾಕಿಸ್ತಾನದ ಧ್ವಜವನ್ನು ಮನೆ ಮೇಲೆ ಹಾರಿಸಿದ್ದಾನೆ ಎಂದು ಹೇಳಿದರು.
‘ಧ್ವಜ ಹಾರಿಸಿದ್ದು ಗೊತ್ತಾಗುತ್ತಿದ್ದಂತೆಯೇ ಮನೆ ಮೇಲಿಂದ ಧ್ವಜವನ್ನು ತೆಗೆದುಹಾಕಿದ್ದಾಗಿಯೂ ಫಾರುಕ್ ಖಾನ್ ಹೇಳಿದ್ದಾರೆ. ಈ ಧ್ವಜ ಹೇಗೆ ಬಂತು ಎಂಬ ಪೊಲೀಸರ ಪ್ರಶ್ನೆಗೆ ಅವರಿಂದ ಯಾವ ಉತ್ತರವೂ ಬರಲಿಲ್ಲ’ ಎಂದು ಲಖನ್ ಸಿಂಗ್ ತಿಳಿಸಿದ್ದಾರೆ.
ನಂತರ ಲಖನ್ ಪೊಲೀಸರಿಗೆ ದೂರು ನೀಡಿದ್ದು, ಭಾನುವಾರ ಸಂಜೆ ಫಾರುಕ್ ಖಾನ್‌ನನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.