ADVERTISEMENT

ನಕಲಿ ಚಿತ್ರ ಪೋಸ್ಟ್‌ ಮಾಡಿದ್ದ ವ್ಯಕ್ತಿಯಿಂದ ಈಗ ಅರ್ಧ ಮೀಸೆ ಕತ್ತರಿಸಿ ಪ್ರತಿಭಟನೆ

ಶಬರಿಮಲೆ ದೇಗುಲಕ್ಕೆ ಮಹಿಳೆಯರ ‍ಪ್ರವೇಶ ವಿರೋಧಿಸಿ ಆರ್‌ಎಸ್ಎಸ್‌ ಅನುಯಾಯಿ ರಾಜೇಶ್ ಕುರುಪ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 8:50 IST
Last Updated 3 ಜನವರಿ 2019, 8:50 IST
   

ಬೆಂಗಳೂರು:ಶಬರಿಮಲೆ ದೇಗುಲಕ್ಕೆ ಮಹಿಳೆಯರಿಬ್ಬರು ಪ್ರವೇಶಿಸಿದ್ದನ್ನು ವಿರೋಧಿಸಿ ಆರ್‌ಎಸ್‌ಎಸ್‌ ಅನುಯಾಯಿ ರಾಜೇಶ್ ಆರ್ ಕುರುಪ್‌ ಎಂಬುವವರು ಅರ್ಧ ಮೀಸೆ ಕತ್ತರಿಸಿ ಪ್ರತಿಭಟಿಸಿದ್ದಾರೆ. ಶಬರಿಮಲೆಯಲ್ಲಿ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಚಿತ್ರ ಪೋಸ್ಟ್ ಮಾಡಿದ್ದ ಆರೋಪದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತಲ್ಲದೆ, ಬಂಧನಕ್ಕೂ ಒಳಗಾಗಿದ್ದರು ಎಂಬುದು ಗಮನಾರ್ಹ.

ಬಿಂದು ಮತ್ತು ಕನಕದುರ್ಗಾ ಅವರು ಶಬರಿಮಲೆ ದೇಗುಲ ಪ್ರವೇಶಿಸಿದ್ದನ್ನು ಪ್ರತಿಭಟಿಸಿ ಅರ್ಧ ಮೀಸೆ ತೆಗೆದಿರುವುದಾಗಿ ರಾಜೇಶ್ ಹೇಳಿದ್ದಾರೆ ಎಂದು ದಿ ನ್ಯೂಸ್‌ ಮಿನಿಟ್ ಸುದ್ದಿತಾಣ ವರದಿ ಮಾಡಿದೆ. ರಾಜೇಶ್ ಅರ್ಧ ಮೀಸೆಯಲ್ಲಿರುವ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು,ತಮ್ಮ ಆಸ್ತಿಗಳ (ದೇಗುಲಗಳನ್ನು) ಸುರಕ್ಷತೆಗೆ ಹಿಂದೂಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದೂ ಬರೆಯಲಾಗಿದೆ.

ಆಲಪ್ಪುಳದ ಮನ್ನಾರ್ ನಿವಾಸಿಯಾಗಿರುವ ರಾಜೇಶ್ ಶಬರಿಮಲೆಯಲ್ಲಿ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ನಕಲಿ ಚಿತ್ರ ಫೊಸ್ಟ್‌ ಮಾಡಿ ಸುದ್ದಿಯಾಗಿದ್ದರು. ಕಪ್ಪು ಬಟ್ಟೆ ಧರಿಸಿ ‘ಇರುಮುಡಿ ಕಟ್ಟು’ ಹೊತ್ತು ಸಾಗುತ್ತಿದ್ದಾಗ ತಮ್ಮ ಎದೆಗೆ ಪೊಲೀಸರು ಒದೆದಿದ್ದಾರೆ ಎಂದು ಆರೋಪಿಸಿದ್ದ ರಾಜೇಶ್ ನಕಲಿ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅದು ವೈರಲ್ ಆಗಿತ್ತು.

ADVERTISEMENT
ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರಾಜೇಶ್ ಪೋಸ್ಟ್ ಮಾಡಿದ್ದ ನಕಲಿ ಚಿತ್ರ

ನಕಲಿ ಫೋಟೊ ವಿಚಾರ ವಿವಾದಕ್ಕೀಡಾಗುತ್ತಿದ್ದಂತೆಯೇ ಫೋಟೊವನ್ನು ರಾಜೇಶ್ ಡಿಲೀಟ್ ಮಾಡಿದ್ದರು. ಚೆನ್ನಿತಲದ ಡಿವೈಎಫ್‌ಐ ಕಾರ್ಯದರ್ಶಿ ನೀಡಿದ ದೂರಿನ ಅನ್ವಯ ರಾಜೇಶ್ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು.

ರಾಜೇಶ್ ಅರ್ಧ ಮೀಸೆ ಬೋಳಿಸಿರುವುದನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರನ್ನು ಟ್ರೋಲ್ ಮಾಡಲಾಗಿದೆ. ‘ಮಾತು ಉಳಿಸಿದ ವ್ಯಕ್ತಿ. ಮೋದಿ ಅವರು ಇವರಿಂದ ಕಲಿಯಬೇಕು’ ಎಂದು ಅನಿರುದ್ಧ್ ಸಿಖ್‌ದಾರ್ ಎಂಬುವವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ‘ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದರೆ ಅರ್ಧ ಮೀಸೆ ತೆಗೆಸುತ್ತೇನೆ ಎಂದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುರುಪ್. ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಬಿಜೆಪಿ, ಆರ್‌ಎಸ್‌ಎಸ್‌ನ ಎಲ್ಲ ಕಾರ್ಯಕರ್ತರು ತಾವಾಡಿದ ಮಾತಿನಂತೆಯೇ ನಡೆದರೆ ಬಹಳ ಉತ್ತಮ‘ ಎಂದು ಬರೆದುಕೊಂಡಿದ್ದಾರೆ.

‘ಉಮಾಭಾರತಿ, ಅಮಿತ್ ಶಾ, ಅರುಣ್ ಜೇಟ್ಲಿ, ಉನ್ನತ ಹುದ್ದೆಯಲ್ಲಿರುವ ಮೋದಿಜಿ ಅವರೆಲ್ಲರಿಗಿಂತ ಇವರೇ ಹೆಚ್ಚು ನಂಬಿಕೆಗೆ ಅರ್ಹರು ಎಂದು ಕಾಣಿಸುತ್ತಿದೆ’ ಎಂದು ನವನೀತ್ ಸಿಂಗ್ ಎಂಬುವವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.