ನವದೆಹಲಿ: ಗಂಡು ಮಗುವನ್ನು ಹೆರಲಿಲ್ಲ ಎಂದು ಕೋಪಗೊಂಡ ಪತಿ 23 ವರ್ಷಗಳ ದಾಂಪತ್ಯಕ್ಕೆ ತ್ರಿವಳಿ ತಲಾಖ್ ನೀಡಿ ಅಂತ್ಯ ಹಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೆಹಲಿಯ ಸಾಕೆತ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ನವದೆಹಲಿ ಮೂಲದ ಕೈಗಾರಿಕಾ ಸಂಸ್ಥೆಯ ನಿರ್ದೇಶಕರಾದ ಡ್ಯಾನಿಶ್ ಹಾಶಿಮ್ ಮತ್ತು ಹುಮಾ ಹಾಶಿಮ್ ಎಂಬಾಕೆ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ 20 ಮತ್ತು 18 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡುಮಗುವಿನ ಆಸೆಯಲ್ಲಿದ್ದ ಪತಿ ಇದೀಗ ವಿಚ್ಛೇಧನ ಪಡೆಯಲು 'ತ್ರಿವಳಿ ತಲಾಖ್' ಎಂದು ಉಚ್ಚರಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
'ಪತಿಗೆ ಯಾವಾಗಲೂ ಗಂಡು ಮಗು ಬೇಕೆನ್ನುವ ಬಯಕೆಯಿತ್ತು ಮತ್ತು ಅದಕ್ಕಾಗಿ ಹಲವಾರು ಗರ್ಭಪಾತಗಳಿಗೆ ನನ್ನನ್ನು ಒತ್ತಾಯಿಸಿದ್ದರು. ಒಂದು ದಿನ ಅವರು ನನ್ನ ಮಗಳನ್ನು ಹೊಡೆಯುತ್ತಿದ್ದರು. ಆಕೆಯನ್ನು ಬಿಡಿಸಲು ಪ್ರಯತ್ನಿಸಿದಾಗ ನನ್ನನ್ನೇ ಒದ್ದು, ನನ್ನ ಮೇಲೆ ಉಗುಳಿದರು. ಬೈಯ್ದರು. ನಂತರ ಅವರು ನನಗೆ ತ್ರಿವಳಿ ತಲಾಖ್ ನೀಡಿದರು. ನಾವು ದೂರು ನೀಡಲು ಪ್ರಯತ್ನಿಸಿದ್ದೆವು ಆದರೆ, ಪೊಲೀಸರು ಗಮನ ಹರಿಸಲಿಲ್ಲ. ಅವರು ನಮಗೆ ಜೀವನಾಂಶವನ್ನು ಸಹ ನೀಡಲಿಲ್ಲ' ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ನನ್ನ ಪತಿ ನನಗೆ 'ತ್ರಿವಳಿ ತಲಾಖ್' ನೀಡಿದ ಒಂದು ತಿಂಗಳ ನಂತರ ಜುಲೈ 13 ರಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಲಿಲ್ಲ. ಡ್ಯಾನಿಶ್ ರಾಜಕೀಯವಾಗಿ ಉತ್ತಮ ಸಂಪರ್ಕ ಹೊಂದಿದ್ದರಿಂದಾಗಿ ಪ್ರಕರಣ ದಾಖಲಿಸಿಕೊಳ್ಳುವಲ್ಲೂ ಪೊಲೀಸರು ವಿಫಲರಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಇದಲ್ಲದೆ, ದೂರನ್ನು ಹಿಂಪಡೆಯುವಂತೆ ನನಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹುಮಾ ಹೇಳಿದ್ದಾರೆ. ಮಹಿಳೆ ತನ್ನಿಬ್ಬರು ಹೆಣ್ಣುಮಕ್ಕಳೊಂದಿಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019 ಅನ್ನು ಜುಲೈ 2019 ರಲ್ಲಿ ಸಂಸತ್ತು ಅಂಗೀಕರಿಸಿದೆ. ಈ ಪ್ರಕಾರ, ಮುಸ್ಲಿಮರಲ್ಲಿ 'ತ್ರಿವಳಿ ತಲಾಖ್' ಅನ್ನು ಉಚ್ಚರಿಸುವ ಮೂಲಕ ತ್ವರಿತವಾಗಿ ವಿಚ್ಛೇದನ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.