ನವದೆಹಲಿ: ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ, ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಮುಕೀಮ್ ಅಯೂಬ್ (38) ಎಂದು ಗುರುತಿಸಲಾಗಿದೆ.
ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಆಕರ್ಷಕ ಪ್ರೊಫೈಲ್ ಸೃಷ್ಟಿಸಿ, ಸರ್ಕಾರಿ ಅಧಿಕಾರಿಯಂತೆ ಮಹಿಳೆಯರನ್ನು ನಂಬಿಸುತ್ತಿದ್ದ ಮುಕೀಮ್, ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡುತ್ತಿದ್ದನು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಯು ವಿಧವೆಯರು ಹಾಗೂ ವಿಚ್ಛೇಧಿತ ಮಹಿಳೆಯರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದನು. ಮಹಿಳೆಯ ನಂಬಿಕೆ ಗಳಿಸಿಕೊಂಡ ಬಳಿಕಷ್ಟೇ ಮದುವೆ ನಾಟಕವಾಡುತ್ತಿದ್ದನು. ಮದುವೆಗಾಗಿ ರೆಸಾರ್ಟ್, ಹೋಟೆಲ್, ಮಂಟಪ ಬುಕ್ಕಿಂಗ್ ಸೇರಿದಂತೆ ವಿವಿಧ ಕಾರಣ ನೀಡಿ ಹಣವನ್ನು ದೋಚುತ್ತಿದ್ದನು.
ಮದುವೆಯ ಹೆಸರಿನಲ್ಲಿ ಹಣ, ಮೊಬೈಲ್ ಫೋನ್ ಮತ್ತು ಆಭರಣಗಳಂತಹ ದುಬಾರಿ ವಸ್ತುಗಳನ್ನು ಮಹಿಳೆಯರಿಂದ ತೆಗೆದುಕೊಂಡು ಪರಾರಿಯಾಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಆರೋಪಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು. ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಗುಜರಾತಿನ ವಡೋರಾದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದ ಆರೋಪಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.