ಅಹಮದಾಬಾದ್: ತನ್ನ ಸಂಗಾತಿಯನ್ನು ಕೊಲೆಗೈದು, ಶವವನ್ನು ಅಡುಗೆ ಕೋಣೆಯ ಸಿಂಕ್‌ನ ಕೆಳಗೆ ಗಾರೆ ಹಾಕಿ ಮುಚ್ಚಿಟ್ಟಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು, 14 ವರ್ಷಗಳ ಬಳಿಕ ಆರೋಪಿಯನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತನನ್ನು ರಮೇಶ್ ದೇಸಾಯಿ ಎಂದು ಗುರುತಿಸಲಾಗಿದೆ. 2010ರ ಜೂನ್ 29ರಂದು ಮನೀಶ್ ಸಹಾಯ್ ಎಂಬುವವರನ್ನು ಕೊಲೆ ಮಾಡಿದ ಆರೋಪವನ್ನು ರಮೇಶ್ ದೇಸಾಯಿ ಎದುರಿಸುತ್ತಿದ್ದಾರೆ.
ಘಟನೆಯ ಹಿನ್ನೆಲೆ...
ಮನೀಶ್ ಹಾಗೂ ರಮೇಶ್ ಹಲವು ವರ್ಷಗಳ ಕಾಲ ಸಹಜೀವನ ನಡೆಸುತ್ತಿದ್ದರು. ಇವರಿಬ್ಬರ ನಡುವೆ ನಡೆದ ಜಗಳದಲ್ಲಿ ಮನೀಶ್ ತಲೆಗೆ ರಮೇಶ್ ಇಟ್ಟಿಗೆಯಿಂದ ಹೊಡೆದಿದ್ದ. ತೀವ್ರವಾಗಿ ಗಾಯಗೊಂಡ ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ನಂತರ ಮೃತದೇಹಕ್ಕೆ ಬೇರೊಂದು ಬಟ್ಟೆಯನ್ನು ಸುತ್ತಿ, ಅದನ್ನು ತಾವು ಬಾಡಿಗೆಗೆ ಇದ್ದ ಮನೆಯ ಅಡುಗೆ ಕೋಣೆಯ ಸಿಂಕ್ ಕೆಳಗಿನ ಜಾಗದಲ್ಲಿಟ್ಟು, ಮರಳು ಹಾಗೂ ಸಿಮೆಂಟ್‌ನ ಗಾರೆಯಲ್ಲಿ ಮುಚ್ಚಿದ್ದ ಎಂದು ಕ್ರೈಂ ಬ್ರಾಂಚ್‌ನ ಪೊಲೀಸರು ತಿಳಿಸಿದ್ದಾರೆ.
ಅಲ್ಲಿಂದ ಪರಾರಿಯಾಗಿದ್ದ ರಮೇಶ್ ಎಂಟು ವರ್ಷಗಳ ಕಾಲ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ. ನಂತರ ತನ್ನ ಹೊಸ ಹೆಸರು ಹಾಗೂ ಗುರುತಿಗೆ ಸಂಬಂಧಿಸಿದ ದಾಖಲೆ ಹಾಗೂ ವಿಮಾ ಪಾಲಿಸಿಯನ್ನೂ ಪಡೆದುಕೊಂಡಿದ್ದ. 2017ರಲ್ಲಿ ಈತ ಮಹಾರಾಷ್ಟ್ರಕ್ಕೆ ಮರಳಿದ್ದ. ನವೀ ಮುಂಬೈನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಸೀನಿಯರ್ ಕ್ಯಾಪ್ಟನ್ ಹುದ್ದೆ ಸಂಪಾದಿಸಿದ್ದ.
ಮನೀಶ್ ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು ಕೊಳೆತ ಸ್ಥಿತಿಯಲ್ಲಿ ಮೃತದೇಹವನ್ನು ಪತ್ತೆ ಮಾಡಿದ್ದರು. ಇದೊಂದು ವಿಭಿನ್ನ ಮಾದರಿಯ ಪ್ರಕರಣ ಎಂದು ಪರಿಗಣಿಸಿದ ಪೊಲೀಸರು, ಪ್ರಕರಣದ ತನಿಖೆ ಆರಂಭಿಸಿದ್ದರು. ಶಂಕಿತ ವ್ಯಕ್ತಿಯು ಮುಂಬೈನಿಂದ ರಾಜಸ್ಥಾನ ಮಾರ್ಗದಲ್ಲಿ ಸಂಚರಿಸುತ್ತಿದ್ದರೂ, ಆಗಾಗ್ಗ ಅಹಮದಾಬಾದ್‌ಗೆ ಬಂದು ಹೋಗುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ರಮೇಶ್ ಆರಂಭದಲ್ಲಿ ಸುಳ್ಳು ಹೇಳಿದ್ದ. ನಂತರ ತನ್ನ ಅಸಲಿ ಹೆಸರು ಹಾಗೂ ಕೃತ್ಯವನ್ನು ಒಪ್ಪಿಕೊಂಡ’ ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.