ನವದೆಹಲಿ: ದೇಶ ವಿಭಜನೆಯ ನಂತರ ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸಕಾಲಿಕ ಮತ್ತು ದಿಟ್ಟ ನಿರ್ಧಾರ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಭಾನುವಾರ ಪ್ರಸಾರವಾದ ಧ್ವನಿಮುದ್ರಿತ ‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ದಾರ್ ಪಟೇಲ್ ಇಲ್ಲದೆ ಭಾರತದ ಏಕೀಕರಣ ಊಹಿಸುವುದು ಸಾಧ್ಯವಿರಲಿಲ್ಲ. ಜುನಾಗಡ, ಹೈದರಾಬಾದ್, ತಿರುವಾಂಕೂರು, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರದಂತಹ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸುವಲ್ಲಿ ಅವರ ಧೈರ್ಯ ನಮಗೆಲ್ಲ ಮಾದರಿ ಎಂದು ಸ್ಮರಿಸಿದರು.
‘ಇಂದು ನಾವು ನೋಡುತ್ತಿರುವ ಸುಂದರ ಏಕೀಕೃತ ಭಾರತವು ಪಟೇಲ್ ಅವರ ಧೀಮಂತ ವ್ಯಕ್ತಿತ್ವ, ತಂತ್ರಗಾರಿಕೆ, ಜಾಣ್ಮೆ, ಧೈರ್ಯದ ಫಲ’ ಎಂದು ಮೋದಿ ಶ್ಲಾಘಿಸಿದರು.
‘ಅ.31ರಂದು ಲೋಕಾರ್ಪಣೆಯಾಗಲಿರುವ ‘ಏಕತೆಯ ಮೂರ್ತಿ’ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ’ ಎಂದರು. ಪಟೇಲ್ ಜಯಂತಿ ಅಂಗವಾಗಿ ಬುಧವಾರ ಆಯೋಜಿಸಲಾಗಿರುವ ‘ಏಕತೆಗಾಗಿ ಓಟ’ದಲ್ಲಿ ಪಾಲ್ಗೊಳ್ಳುವಂತೆ ಯುವಕರಿಗೆ ಅವರು ಮನವಿ ಮಾಡಿದರು.
ಗುಜರಾತ್‌ನ ನರ್ಮದಾ ದಂಡೆಯ ಮೇಲಿರುವ ಏಕತಾ ಮೂರ್ತಿ ಹೊಸ ಆಕರ್ಷಕ ಪ್ರವಾಸಿ ತಾಣವಾಗಲಿದೆ ಎಂದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಅವರ ಕೊಡುಗೆಯನ್ನು ಸ್ಮರಿಸಿದರು.
ಎಫ್–16 ಯುದ್ಧ ವಿಮಾನ ಖರೀದಿಗೆ ಒತ್ತಡ ಹೇರುವುದಿಲ್ಲ: ಅಮೆರಿಕ ಕಾನ್ಸುಲ್ ಜನರಲ್
ಮುಂಬೈ(ಪಿಟಿಐ): ಎಫ್–16 ಯುದ್ಧ ವಿಮಾನ ಅಥವಾ ಇತರ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವಂತೆ ಭಾರತದ ಮೇಲೆ ಒತ್ತಡ ಹೇರುವುದಿಲ್ಲ ಎಂದು ಅಮೆರಿಕದ ಕಾನ್ಸುಲ್ ಜನರಲ್ ಎಡ್ಗರ್ಡ್ ಕಗನ್ ಹೇಳಿದ್ದಾರೆ.
ಭಾರತವು ಈಗಾಗಲೇ ಅಮೆರಿಕದಿಂದ ಅಂದಾಜು ₹1.11 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಿದೆ. ಭಾರತದ ಜೊತೆ ರಕ್ಷಣಾ ಒಪ್ಪಂದ ಮುಂದುವರಿಸಲು ಅಮೆರಿಕ ಹೆಮ್ಮೆಪಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಷ್ಯಾದಿಂದ ಎಸ್–400 ಟ್ರೈಂಫ್ ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿರುವ ಕಾರಣ ಅಮೆರಿಕ ಭಾರತದ ಮೇಲೆ ವ್ಯಾಪಾರ ನಿರ್ಬಂಧ ಹೇರಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ನೇರ ಉತ್ತರ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.