ADVERTISEMENT

ವ್ಯಕ್ತಿ ಅಪಹರಣ, ಬಲವಂತದಿಂದ ಮೂತ್ರ ಕುಡಿಸಿದ ಗುಂಪು: ಆರೋಪ

ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಕೃತ್ಯ * 7 ಜನರ ವಿರುದ್ಧ ಎಫ್‌ಐಆರ್‌

ಪಿಟಿಐ
Published 28 ಮೇ 2024, 12:43 IST
Last Updated 28 ಮೇ 2024, 12:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗುನಾ(ಮಧ್ಯಪ್ರದೇಶ): ವಿವಾದವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವ್ಯಕ್ತಿಯನ್ನು ಗುಂಪೊಂದು ಅಪಹರಿಸಿ, ಆತನನ್ನು ನೆರೆಯ ರಾಜಸ್ಥಾನಕ್ಕೆ ಕರೆದೊಯ್ದಿದೆ. ವ್ಯಕ್ತಿಗೆ ಬಲವಂತದಿಂದ ಮೂತ್ರ ಕುಡಿಸಿರುವ ಗುಂಪು, ಮಹಿಳೆಯ ಉಡುಗೆ ತೊಡಿಸಿ ಆತನ ಮೆರವಣಿಗೆ ಮಾಡಿದೆ ಎನ್ನಲಾಗಿದೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.

ಆರೋಪಿಗಳು ಅಪಹರಣ ಮಾಡಿರುವ ವ್ಯಕ್ತಿಯ ತಲೆ ಬೋಳಿಸಿದ್ದಲ್ಲದೇ, ಆತನಿಗೆ ಶೂಗಳ ಹಾರ ಹಾಕಿದ್ದರು ಎನ್ನಲಾಗಿದೆ. 

ADVERTISEMENT

ಮೇ 22ರಂದು ರಾಜಸ್ಥಾನದಲ್ಲಿ ಈ ಘಟನೆ ನಡೆದಿದೆ. ಆದರೆ, ವ್ಯಕ್ತಿಯನ್ನು ಗುನಾ ಜಿಲ್ಲೆಯಿಂದ ಅಪಹರಣ ಮಾಡಿರುವ ಕಾರಣ, ಇಲ್ಲಿನ ಫತೇಹಗಢ ಪೊಲೀಸ್‌ ಠಾಣೆಯಲ್ಲಿ 7 ಜನರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂಜೀವ್‌ ಸಿನ್ಹಾ ಹೇಳಿದ್ದಾರೆ.

ಅಪಹರಿಸಲಾದ ವ್ಯಕ್ತಿಗೆ ನೀಡಲಾಗಿದೆ ಎನ್ನಲಾದ ಚಿತ್ರಹಿಂಸೆಯ ವಿಡಿಯೊ ಚಿತ್ರೀಕರಣ ಮಾಡಿರುವ ಆರೋಪಿಗಳು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ₹25 ಲಕ್ಷ ನೀಡುವಂತೆ ಆತನಿಗೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

‘10–12 ಜನರಿದ್ದ ಗುಂಪು ವ್ಯಕ್ತಿಯನ್ನು ಅಪಹರಿಸಿ, ರಾಜಸ್ಥಾನದ ಝಲ್ವಾರ ಹಾಗೂ ಪಟನ್ ಎಂಬಲ್ಲಿಗೆ ಜೀಪ್‌ನಲ್ಲಿ ಕರೆದೊಯ್ದು ಈ ಕೃತ್ಯ ಎಸಗಿದೆ ಎನ್ನಲಾಗಿದೆ’ ಎಂದು ಫತೇಹಗಢ ಠಾಣೆ ಪೊಲೀಸ್‌ ಅಧಿಕಾರಿ ಕೃಪಾಲ್ ಸಿಂಗ್ ಹೇಳಿದ್ದಾರೆ.

ರಾಜೀನಾಮೆಗೆ ಆಗ್ರಹ:

ಈ ಘಟನೆ ಕುರಿತು ಪ್ರತಿಕ್ರಿಯಸಿರುವ ವಿರೋಧ ಪಕ್ಷ ಕಾಂಗ್ರೆಸ್‌, ‘ಮುಖ್ಯಮಂತ್ರಿ ಮೋಹನ್‌ ಯಾದವ್‌ ಗೃಹ ಖಾತೆ ಹಾಗೂ ರಾಜ್ಯದ ಆಡಳಿತ ನಿಭಾಯಿಸುವಲ್ಲಿ ವಿಫಲರಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದೆ. ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.