ಬೆಂಗಳೂರು: ಮುಂಬೈನಿಂದ ಬೆಂಗಳೂರಿಗೆ ಸ್ಪೈಸ್‌ಜೆಟ್ ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರು ಶೌಚಾಲಯದೊಳಗೆ ಸುಮಾರು 2 ಗಂಟೆಗಳ ಕಾಲ ಸಿಲುಕಿಕೊಂಡಿದ್ದ ಘಟನೆ ಮಂಗಳವಾರ ನಡೆದಿದೆ.
ಎಸ್‌ಜಿ–268 ವಿಮಾನವು ಮುಂಬೈನಿಂದ ಸೋಮವಾರ ರಾತ್ರಿ 10.55ಕ್ಕೆ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ ವಿಳಂಬವಾಗಿದ್ದರಿಂದ ಮಂಗಳವಾರ ನಸುಕಿನ 2ಕ್ಕೆ ಹೊರಟಿತು. ಬೆಂಗಳೂರು ತಲುಪುವ ಹೊತ್ತಿಗೆ 3:42 ಆಗಿತ್ತು. ಆದರೆ ವಿಮಾನ ಟೇಕ್‌ಆಫ್ ಆದ ಸಂದರ್ಭದಲ್ಲಿ 14ಡಿ ಆಸನದಲ್ಲಿ ಕುಳಿತಿದ್ದ ವ್ಯಕ್ತಿ ಶೌಚಾಲಯಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಸೀಟ್‌ಬೆಲ್ಟ್ ಸಂದೇಶ ಬಂದ್ ಆಗಿತ್ತು.
ಶೌಚಾಲಯದ ಒಳಗೆ ಪ್ರವೇಶಿಸಿ ಬಾಗಿಲು ಹಾಕಿಕೊಂಡ ನಂತರ ಅದು ತೆರೆಯಲು ಬರಲಿಲ್ಲ. ವಿಮಾನ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ.
‘ಬಾಗಿಲು ತೆರೆಯಲು ನಾವು ಸಾಕಷ್ಟು ಪ್ರಯತ್ನ ಪಡುತ್ತಿದ್ದೇವೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಭಯಪಡಬೇಡಿ. ಕೆಲವೇ ನಿಮಿಷಗಳಲ್ಲಿ ನಾವು ಲ್ಯಾಂಡ್ ಆಗುತ್ತೇವೆ. ಕಮೋಡ್‌ನ ಮುಚ್ಚಳ ಹಾಕಿ, ಅದರ ಮೇಲೆಯೇ ಗಟ್ಟಿಯಾಗಿ ಕುಳಿತುಕೊಳ್ಳಿ. ವಿಮಾನದ ಮುಖ್ಯ ದ್ವಾರ ತೆರೆಯುತ್ತಿದ್ದಂತೆ, ಎಂಜಿನಿಯರ್‌ಗಳು ಬಂದು ಬಾಗಿಲು ತೆರೆಯುತ್ತಾರೆ’ ಎಂದು ಕಾಗದದಲ್ಲಿ ಬರೆದ ಗಗನಸಖಿಯರು ಅದನ್ನು ಬಾಗಿಲ ಕೆಳಗಿನಿಂದ ಶೌಚಾಲಯದ ಒಳಕ್ಕೆ ಕಳುಹಿಸಿದರು.
‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ, ಎಂಜಿನಿಯರ್‌ಗಳು ಬಾಗಿಲ ಬೀಗ ಮುರಿದು, ಸಿಲುಕಿದ್ದ ಪ್ರಯಾಣಿಕನನ್ನು ಹೊರಕ್ಕೆ ಕರೆತಂದರು. ಪ್ರಯಾಣಿಕರು ಗಾಬರಿಯಾಗಿದ್ದರು. ಅವರನ್ನು ಕೂಡಲೇ ಪ್ರಥಮ ಚಿಕಿತ್ಸೆಗೆ ಕರೆದೊಯ್ಯಲಾಯಿತು’ ಎಂದು ವರದಿಯಾಗಿದೆ.
ಶೌಚಾಲಯದೊಳಗೆ ಸಿಲುಕಿದ ವ್ಯಕ್ತಿಯ ಸಂಪೂರ್ಣ ಪ್ರಯಾಣ ದರವನ್ನು ಹಿಂದಿರುಗಿಸಲು ವಿಮಾನ ಸಂಸ್ಥೆ ನಿರ್ಧರಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.