ADVERTISEMENT

IPS ಅಧಿಕಾರಿಯಂತೆ ನಟನೆ: ನಕಲಿ ಪೊಲೀಸ್‌ ವಾಹನ ಬಳಸಿ ಉದ್ಯಮಿಗೆ ₹1 ಕೋಟಿ ವಂಚನೆ

ಪಿಟಿಐ
Published 28 ಅಕ್ಟೋಬರ್ 2024, 11:26 IST
Last Updated 28 ಅಕ್ಟೋಬರ್ 2024, 11:26 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ನಾಸಿಕ್(ಮಹಾರಾಷ್ಟ್ರ): ಐಪಿಎಸ್ ಅಧಿಕಾರಿಯಂತೆ ನಟಿಸಿ, ಉದ್ಯಮಿಯೊಬ್ಬರಿಗೆ ₹1 ಕೋಟಿ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿಯನ್ನು ಗೌರವ್ ರಾಮಚೇಶ್ವರ ಮಿಶ್ರಾ ಎಂದು ಗುರುತಿಸಲಾಗಿದೆ.

ADVERTISEMENT

ಪೊಲೀಸ್ ಸಮವಸ್ತ್ರವನ್ನು ಧರಿಸಿ, ನಕಲಿ ಗುರುತಿನ ಚೀಟಿ ಹಾಗೂ ಪೊಲೀಸ್‌ ವಾಹನ ಬಳಸುತ್ತಿದ್ದ ಆರೋಪಿಗೆ ನಾಸಿಕ್‌ನ ಉದ್ಯಮಿಯೊಬ್ಬರ ಪರಿಚಯವಾಗಿದೆ. ರೈಲ್ವೆ ಇಲಾಖೆಯ ಟೆಂಡರ್‌ ಕೊಡಿಸುವ ನೆಪದಲ್ಲಿ ಸುಮಾರು ₹1 ಕೋಟಿ ವಂಚಿಸಿದ್ದಾನೆ ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಂಚನೆ ಅರಿತ ಉದ್ಯಮಿ ಹಣ ವಾಪಸ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಚರ್ಚಿಸುವುದಾಗಿ ಹೋಟೆಲ್‌ಗೆ ಕರೆಸಿಕೊಂಡ ಆರೋಪಿ, ತಲೆಗೆ ಬಂದೂಕು ಹಿಡಿದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ಪ್ರತಿ ತಿಂಗಳು ₹5 ಲಕ್ಷ ಸುಲಿಗೆಗೆ ಬೇಡಿಕೆ ಇಟ್ಟಿದ್ದು, ನೀಡದಿದ್ದರೆ, ಪೊಲೀಸ್‌ ಇಲಾಖೆಯಲ್ಲಿನ ಅಧಿಕಾರಿಗಳ ಪ್ರಭಾವ ಬಳಸಿ ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವುದಾಗಿಯೂ ಬೆದರಿಕೆ ಹಾಕಿದ್ದನು ಎಂದು ದೂರುದಾರ ತಿಳಿಸಿರುವುದಾಗಿಯೂ ಪೊಲೀಸರು ಹೇಳಿದ್ದಾರೆ.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.