ತಿರುವನಂತಪುರ: ಕೊಚ್ಚಿಯ ಕಲಮಸ್ಸೇರಿ ಕ್ರಿಶ್ಚಿಯನ್ ಧಾರ್ಮಿಕ ಸಮಾವೇಶದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಹೊಣೆ ಹೊತ್ತಿದ್ದು, ವಿಡಿಯೊ ಬಿಡುಗಡೆ ಮಾಡಿದ್ದಾನೆ.
ವಿವಿಧ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾದ ವಿಡಿಯೊದಲ್ಲಿ ತನ್ನನ್ನು ಮಾರ್ಟಿನ್ ಎಂದು ಗುರುತಿಸಿಕೊಂಡಿರುವ ವ್ಯಕ್ತಿ, ಯಹೋವನ ವಿಟ್ನೆಸಸ್ ಎಂಬ ಕ್ರಿಶ್ಚಿಯನ್ ಸಂಘಟನೆಗೆ ಸೇರಿದವನೆಂದು ಹೇಳಿದ್ದಾನೆ. ಸಂಘಟನೆಯ ಬೋಧನೆಗಳು ದೇಶದ್ರೋಹದ ರೀತಿಯಂತಿದ್ದು, ಅದರ ವಿರುದ್ಧ ಪ್ರತಿಭಟನಾರ್ಥವಾಗಿ ಸ್ಫೋಟದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ.
ಈ ಆರೋಪಗಳಿಗೆ ಸಂಬಂಧಿಸಿದಂತೆ ಸಂಘಟನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ, ಧಾರ್ಮಿಕ ಗುಂಪಿನ ಸದಸ್ಯರೊಬ್ಬರು ಟಿವಿ ಚಾನೆಲ್ ಜೊತೆ ಮಾತನಾಡಿದ್ದು, ಮಾರ್ಟಿನ್ ಹೆಸರಿನ ಯಾವುದೇ ವ್ಯಕ್ತಿ ಪ್ರಸ್ತುತ ತಮ್ಮ ಸಂಘಟನೆಯಲ್ಲಿ ಇಲ್ಲ ಎಂದಿದ್ದಾರೆ.
‘ಅಲ್ಲಿ ಏನಾಯಿತು ಎಂದು ನನಗೆ ನಿಖರವಾಗಿ ತಿಳಿದಿಲ್ಲ, ಆದರೆ ಸ್ಫೋಟಗಳು ಸಂಭವಿಸಿದೆ ಎಂದು ನನಗೆ ತಿಳಿದಿದೆ ಮತ್ತು ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ’ಎಂದು ಮಾರ್ಟಿನ್ ಹೇಳಿಕೊಂಡಿರುವ ವ್ಯಕ್ತಿ ವಿಡಿಯೊದಲ್ಲಿ ಹೇಳಿದ್ದಾನೆ.
ನಾನು ಆ ನಿರ್ಧಾರವನ್ನು ಏಕೆ ತೆಗೆದುಕೊಂಡೆ ಎಂಬುದನ್ನು ಜನರಿಗೆ ತಿಳಿಸಲು ವಿಡಿಯೊ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.
ತಾನು 16 ವರ್ಷಗಳಿಂದ ಯೆಹೋವನ ವಿಟ್ನೆಸಸ್ ಕ್ರಿಶ್ಚಿಯನ್ ಧಾರ್ಮಿಕ ಗುಂಪಿನ ಭಾಗವಾಗಿದ್ದೇನೆ. ಸಂಘಟನೆಯ ಬೋಧನೆಗಳನ್ನು ಸರಿಪಡಿಸುವಂತೆ ಹಲವು ಬಾರಿ ಹೇಳಿದ್ದರೂ ಅದನ್ನು ಮಾಡಲಿಲ್ಲ. ಹೀಗಾಗಿ, ನನಗೆ ಬೇರೆ ದಾರಿ ಕಾಣದ ಕಾರಣ, ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ವ್ಯಕ್ತಿ ವಾದಿಸಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.