ADVERTISEMENT

ವಾಮಾಚಾರದ ಆರೋಪ: ಒಡಿಶಾದಲ್ಲಿ ವ್ಯಕ್ತಿಗೆ ಬೆಂಕಿ ಹಚ್ಚಿದ 'ಕಾಂಗರೂ ನ್ಯಾಯಾಲಯ'

ಪಿಟಿಐ
Published 19 ಅಕ್ಟೋಬರ್ 2024, 10:31 IST
Last Updated 19 ಅಕ್ಟೋಬರ್ 2024, 10:31 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಭುವನೇಶ್ವರ (ಒಡಿಶಾ): ವಾಮಾಚಾರ ನಡೆಸಿದ ಆರೋಪದಲ್ಲಿ 50 ವರ್ಷದ ವ್ಯಕ್ತಿಯೊಬ್ಬರಿಗೆ ಗ್ರಾಮಸ್ಥರು ಬೆಂಕಿ ಹಚ್ಚಿರುವ ಘಟನೆ ನೌಪಾದ ಜಿಲ್ಲೆಯಲ್ಲಿ ವರದಿಯಾಗಿದೆ.

‌ಸಂತ್ರಸ್ತ ಖಾಮ್‌ ಸಿಂಗ್‌ ಮಾಝಿ ಅವರು ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ADVERTISEMENT

ಪ್ರಕರಣದ ಬಗ್ಗೆ ಶನಿವಾರ ಮಾಹಿತಿ ನೀಡಿರುವ ಪೊಲೀಸರು, 'ವಾಮಾಚಾರ ನಡೆಸುತ್ತಾರೆ ಎಂಬ ಆರೋಪ ಸಿಂಗ್‌ ಅವರ ಮೇಲಿತ್ತು. ಈ ಸಂಬಂಧ ಜಿಲ್ಲೆಯ ಪೊರ್ತಿಪದ ಗ್ರಾಮಸ್ಥರು ಶುಕ್ರವಾರ ಸಂಜೆ ಸಭೆ ಸೇರಿದ್ದರು. ಸಭೆಗೆ ಬರುವಂತೆ ಸಿಂಗ್‌ ಅವರಿಗೂ ಸೂಚಿಸಲಾಗಿತ್ತು. ವಿಚಾರಣೆ ನಡೆಸಿದ ಕಾಂಗರೂ ನ್ಯಾಯಾಲಯವು (ನಿರ್ದಿಷ್ಟ ಹಿತಾಸಕ್ತಿಯುಳ್ಳ ಜನರ ಗುಂಪು), ಆರೋಪವನ್ನು ಎತ್ತಿ ಹಿಡಿದಿತ್ತು. ಶಿಕ್ಷೆಯಾಗಿ, ಸಿಂಗ್‌ ಅವರನ್ನು ಕಟ್ಟಿಹಾಕಿ ಬೆಂಕಿ ಹಚ್ಚಬೇಕು ಎಂದು ಘೋಷಿಸಿತ್ತು' ಎಂದಿದ್ದಾರೆ.

'ಬೆಂಕಿ ಹಚ್ಚಿದ್ದರಿಂದ ನೋವಿನಿಂದ ಚೀರಾಡಿದ ಮಾಝಿ, ನೆರವಿಗಾಗಿ ಅಂಗಲಾಚಿದರೂ ಯಾರೊಬ್ಬರೂ ಮುಂದೆ ಬರಲಿಲ್ಲ. ಕೊನೆಗೆ ಮಾಝಿ ಕೊಳಕ್ಕೆ ಜಿಗಿದಿದ್ದರು. ಅವರನ್ನು ರಕ್ಷಿಸಿದ ಕುಟುಂಬದವರು, ಸಿನಪಲಿ ಸಾರ್ವಜನಿಕ ಆಸ್ಪತ್ರೆ ದಾಖಲಿಸಿದ್ದರು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ' ಎಂದು ವಿವರಿಸಿದ್ದಾರೆ.

ಮಾಝಿ ಅವರ ಮಗ ಹೇಮಲಾಲ್‌ ಅವರು, 'ಸಭೆ ಸೇರಿದ್ದ ಗ್ರಾಮಸ್ಥರು, ವಾಮಾಚಾರ ನಡೆಸಿದ್ದಕ್ಕಾಗಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಪ್ಪನನ್ನು ಬೆದರಿಸಿದ್ದರು. ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅವರು ನಿರಾಕರಿಸಿದ್ದರು. ಇದರಿಂದ ಕೆರಳಿದ ಗ್ರಾಮಸ್ಥರು ಅಪ್ಪನ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದರು' ಎಂದು ಹೇಳಿಕೆ ನೀಡಿದ್ದಾರೆ.

ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ಕೆ. ಅರೂಪ್‌ ಬೆಹೆರ ಅವರು, 'ಈ ಸಂಬಂಧ ಸಿನಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಗ್ರಾಮಕ್ಕೆ ತೆರಳುವುದರೊಳಗೆ ಹೆಚ್ಚಿನವರು ಮನೆಗಳನ್ನು ತೊರೆದು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

'ಮಾಝಿ ಅವರನ್ನು ಜೀವಂತವಾಗಿ ಸುಡಲು ಯತ್ನಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ. ಪ್ರಕರಣಕ್ಕೆ ಕಾರಣವೇನು ಎಂಬುದು ಸಂಪೂರ್ಣ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ' ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.