ಮುಂಬೈ: ಲಂಡನ್-ಮುಂಬೈ ಮಾರ್ಗದ ಏರ್ ಇಂಡಿಯಾ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿ, ಇತರ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಅಮೆರಿಕದ ಪ್ರಜೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಭಾನುವಾರ ತಿಳಿಸಿದ್ದಾರೆ.
37 ವರ್ಷದ ಭಾರತ ಮೂಲದ ಅಮೆರಿಕ ನಿವಾಸಿ ರಮಾಕಾಂತ್ ಬಂಧಿತ ವ್ಯಕ್ತಿ. ಮಾರ್ಚ್ 11 ರಂದು ವಿಮಾನದ ಮಧ್ಯದಲ್ಲಿ ಇತರ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಮುಂಬೈನ ಸಹರ್ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 336 (ಮನುಷ್ಯನ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕಾರ್ಯ) ಮತ್ತು ಏರ್‌ಕ್ರಾಫ್ಟ್ ಆಕ್ಟ್ 1937, 22 (ಕಾನೂನು ಪಾಲನೆ ನಿರಾಕರಣೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ವಿಮಾನದಲ್ಲಿ ಧೂಮಪಾನ ಸೇವನೆ ಕಾನೂನುಬಾಹಿರ. ಆದರೆ ರಮಾಕಾಂತ್ ಶೌಚಾಲಯಕ್ಕೆ ಹೋಗುತ್ತಿದ್ದಂತೆ ಅಲಾರಂ ರಿಂಗ್ ಆಗಿದೆ. ಎಲ್ಲಾ ಸಿಬ್ಬಂದಿ ಹೋಗಿ ಪರೀಕ್ಷಿಸಿದಾಗ ಆರೋಪಿ ಕೈಯಲ್ಲಿ ಸಿಗರೇಟ್ ಇತ್ತು. ತಕ್ಷಣ ಅವರ ಕೈಯಿಂದ ಸಿಗರೇಟನ್ನು ಕಸಿದು ಎಸೆದಿದ್ದೇವೆ. ಇದರಿಂದ ಕೋಪಗೊಂಡ ರಮಾಕಾಂತ್ ಕೂಗಾಟ ಆರಂಭಿಸಿದ್ದಾರೆ. ಸಿಬ್ಬಂದಿ ಸಹಾಯದಿಂದ ಅವರನ್ನು ಕರೆತಂದು ಆಸನದಲ್ಲಿ ಕೂರಿಸಲಾಗಿದೆ. ಆದರೆ ಸ್ವಲ್ಪ ಸಮಯದ ನಂತರ ಅವರು ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿದ್ದು, ಉಳಿದ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದಾರೆ’ಎಂದು ಏರ್ ಇಂಡಿಯಾದ ಸಿಬ್ಬಂದಿ ಸಹರ್ ಪೊಲೀಸರಿಗೆ ತಿಳಿಸಿದ್ದಾರೆ.
‘ಅವರ ಕೈಕಾಲು ಕಟ್ಟಿ ಕೂರಿಸಲಾಯಿತು. ಆದರೆ ಆರೋಪಿ ತಲೆ ಚಚ್ಚಿಕೊಳ್ಳಲು ಪ್ರಾರಂಭಿಸಿದ್ದಾರೆ. ಪ್ರಯಾಣಿಕರಲ್ಲೊಬ್ಬರು ವೈದ್ಯರಿದ್ದು, ಆರೋಪಿಯನ್ನು ಪರೀಕ್ಷಿಸಿದರು. ನಂತರ ಔಷಧಿಗಾಗಿ ರಮಾಕಾಂತ್ ಅವರ ಬ್ಯಾಗ್ ಪರಿಶೀಲಿಸುವಾಗ ಇ-ಸಿಗರೇಟ್ ಪತ್ತೆಯಾಗಿದೆ’ ಎಂಬುದಾಗಿ ದೂರಿನಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಮಾನ ಲ್ಯಾಂಡ್ ಆದ ನಂತರ ಪ್ರಯಾಣಿಕ ರಮಾಕಾಂತ್ ಅವರನ್ನು ಸಹರ್ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದರು. ಆರೋಪಿ ಭಾರತೀಯ ಮೂಲದವರಾದರೂ ಅಮೆರಿಕದ ಪ್ರಜೆಯಾಗಿದ್ದು, ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.