ಪಟ್ನಾ(ಬಿಹಾರ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಿದ್ದ 25 ವರ್ಷದ ಯುವಕನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
‘ಪ್ರಕರಣದ ಪ್ರಮುಖ ಆರೋಪಿ ನಗರದ ಹೊರವಲಯದಲ್ಲಿರುವ ಬರ್ಹ್ ಪ್ರದೇಶದಲ್ಲಿ ವಾಸವಿರುವ ಬಗ್ಗೆ ಮಾಹಿತಿ ಬಂದಿದ್ದು, ಆತನನ್ನು ಅಲ್ಲಿಂದಲೇ ಬಂಧಿಸಲಾಗಿದೆ’ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಮುರಾರಿ ಪ್ರಸಾದ್ ತಿಳಿಸಿದ್ದಾರೆ.
‘ಫೆಬ್ರುವರಿ 14ರಂದು ವಿಡಿಯೊ ಕುರಿತು ಮಾಹಿತಿ ತಿಳಿದಿದ್ದು, ತಕ್ಷಣ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಮುಖ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕರೆದೊಯ್ಯಲಾಗುತ್ತಿದೆ’ ಎಂದು ಅವರು ತಿಳಿಸಿದರು.
ಜೈಲಿಗೆ ಕರೆದುಕೊಂಡು ಹೋಗುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಪಿ, ಕೋಪದ ಭರದಲ್ಲಿ ಹೇಳಿರುವುದಾಗಿ ತಿಳಿಸಿದ್ದಾನೆ.
‘ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯರ ಕುರಿತು ಅಸಭ್ಯವಾಗಿ ಮಾತನಾಡಿದ ನಂತರ ಕ್ಷಮೆ ಕೇಳಿರಲಿಲ್ಲ. ಇದರಿಂದ ಕೋಪಗೊಂಡ ನಾನು, ನಿತೀಶ್ ಕುಮಾರ್ ವಿರುದ್ಧ ಕೋಪದಲ್ಲಿ ಮಾತನಾಡಿದ್ದೇನೆ. ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನನ್ನ ಹೇಳಿಕೆಯಲ್ಲಿ ಯಾವ ಕೆಟ್ಟ ಉದ್ದೇಶವಿರಲಿಲ್ಲ’ ಎಂದಿದ್ದಾನೆ.
ವಿಧಾನಸಭೆಯಲ್ಲಿ ಮಾತನಾಡುವ ವೇಳೆ ನಿತೀಶ್ ಕುಮಾರ್ ಅವರು, ಸುಶಿಕ್ಷಿತ ಮಹಿಳೆಯು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ತನ್ನ ಪತಿಯನ್ನು ಹೇಗೆ ತಡೆಯಬಲ್ಲಳು ಎಂಬುದರ ಚಿತ್ರಣ ನೀಡಿದ್ದರು. ಮಹಿಳೆಯರು ಶಿಕ್ಷಣ ಪಡೆಯುವುದರಿಂದ ಜನಸಂಖ್ಯೆ ನಿಯಂತ್ರಿಸಬಹುದು ಎಂದೂ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.