ಕೋಲ್ಕತ್ತ (ಪಶ್ಚಿಮ ಬಂಗಾಳ): ಕೋಲ್ಕತ್ತ ಪೊಲೀಸ್ ಪ್ರಧಾನ ಕಚೇರಿ ಎಂದು ಭಾವಿಸಿ ಮಮತಾ ಬ್ಯಾನರ್ಜಿ ಅವರ ನಿವಾಸದ ಆವರಣ ಪ್ರವೇಶಿಸಿದ್ದಾಗಿ ಬಂಧಿತ ವ್ಯಕ್ತಿ ಸೋಮವಾರ ಪೊಲೀಸರ ಬಳಿ ಹೇಳಿಕೆ ದಾಖಲಿಸಿದ್ದಾನೆ.
ದಕ್ಷಿಣ ಕೋಲ್ಕತ್ತದ ಕಾಳಿಘಾಟ್ ಪ್ರದೇಶದಲ್ಲಿನ ಹರೀಶ್ ಚಟರ್ಜಿ ರಸ್ತೆಯಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸದ ಆವರಣಕ್ಕೆ ಭಾನುವಾರ ನಸುಕಿನ 1 ಗಂಟೆಯಲ್ಲಿ ಗೋಡೆ ಹಾರಿ ಪ್ರವೇಶಿಸಿದ್ದ ಹಫೀಜುಲ್ ಮೊಲ್ಲಾ (30) ಎಂಬಾತ ಬೆಳಗ್ಗೆ 8 ಗಂಟೆಯ ವರೆಗೆ ಅಲ್ಲೇ ಅಡಗಿ ಕುಳಿತಿದ್ದ. ನಂತರ ಆತನನ್ನು ಪೊಲೀಸರು ಬಂಧಿಸಿದ್ದರು.
ಹಫೀಜುಲ್ ಮೊಲ್ಲಾ, ಉತ್ತರ 24 ಪರಗಣ ಜಿಲ್ಲೆಯ ಹಷ್ನಾಬಾದ್‌ನವನಾಗಿದ್ದು, ಆ ರಾತ್ರಿಯಲ್ಲಿ ಕೋಲ್ಕತ್ತ ಪೊಲೀಸ್ ಪ್ರಧಾನ ಕಚೇರಿಗೆ ಏಕೆ ಹೋಗಬೇಕಿತ್ತು ಎಂಬುದಕ್ಕೆ ಸ್ಪಷ್ಟವಾದ ಉತ್ತರ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ, ಮೊಲ್ಲಾ ಮೊದಲಿಗೆ ತಾನೊಬ್ಬ ಹಣ್ಣಿನ ವ್ಯಾಪಾರಿ ಎಂದಿದ್ದ. ನಂತರ ಉತ್ತಮ ವಾಹನ ಚಾಲಕ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ವ್ಯಕ್ತಿಯ ಹಾವಭಾವ ನೋಡಿದರೆ ಆತ ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾಳಿಘಾಟ್‌ನಲ್ಲಿರುವ ಮಮತಾ ಅವರ ನಿವಾಸ ಪ್ರವೇಶಿಸುವುದಕ್ಕೂ ಮೊದಲು ಮೊಲ್ಲಾ ಭಾನುವಾರವಿಡೀ ಯಾವೆಲ್ಲ ಚಟುವಟಿಕೆಗಳಲ್ಲಿ ತೊಡಗಿದ್ದ ಎಂಬುದರ ಬಗ್ಗೆ ಆತನಿಂದ ಮಾಹಿತಿ ಪಡೆದು, ಘಟನಾವಳಿಗಳನ್ನು ಮರುಚಿತ್ರಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ‘ನಾವು ಆತನ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಕಾಳಿಘಾಟ್‌ಗೆ ಆತ ಹೇಗೆ ಬಂದ, ಒಂಟಿಯಾಗಿ ಬಂದನೇ, ಆತನೊಂದಿಗೆ ಯಾರಾದರೂ ಇದ್ದರೇ, ಭದ್ರತಾ ಸಿಬ್ಬಂದಿಯನ್ನು ದಾಟಿ ಆತ ಹೇಗೆ ಒಳ ಹೋಗಲು ಸಾಧ್ಯವಾಯಿತು ಎಂಬುದನ್ನು ತನಿಖೆ ಮಾಡುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 458ರ ಅಡಿಯಲ್ಲಿ ಮೊಲ್ಲಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಜುಲೈ 11 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳು ಸಭೆ ನಡೆಸಿದ್ದು, ಮಮತಾ ಅವರ ಭದ್ರತಾ ವ್ಯವಸ್ಥೆಗಳ ಪರಾಮರ್ಶೆ ನಡೆಸಿದ್ದಾರೆ. ಸಿಎಂ ನಿವಾಸ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.