ಲಖನೌ: ಉತ್ತರ ಪ್ರದೇಶದ ಸುಲ್ತಾನ್‌ಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ರಾಂಭುಲ್ ನಿಶಾದ್ ಅವರ ಆಯ್ಕೆಯನ್ನು ಪ್ರಶ್ನಿಸಿ ಮಾಜಿ ಸಂಸದೆ, ಬಿಜೆಪಿ ನಾಯಕಿ ಮೇನಕಾ ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮೇನಕಾ ಗಾಂಧಿ ಪರವಾಗಿ ಹಿರಿಯ ವಕೀಲ ಪ್ರಶಾಂತ್ ಸಿಂಗ್ ಅಟಲ್ ಸಲ್ಲಿಸಿರುವ ಅರ್ಜಿಯಲ್ಲಿ, ಎಸ್‌ಪಿ ಸಂಸದ ರಾಂಭುಲ್ ನಿಶಾದ್ ವಿರುದ್ಧ 12 ಪ್ರಕರಣಗಳು ದಾಖಲಾಗಿವೆ. ಆದರೆ, ಚುನಾವಣಾ ಆಯೋಗಕ್ಕೆ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇವಲ 8 ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಂಭುಲ್ ನಿಶಾದ್ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಮೇನಕಾ ಗಾಂಧಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮೇನಕಾ ಗಾಂಧಿ ಅವರನ್ನು ರಾಂಭುಲ್ ನಿಶಾದ್ 43,174 ಮತಗಳ ಅಂತರದಿಂದ ಸೋಲಿಸಿದ್ದರು.
ಸುಲ್ತಾನ್‌ಪುರ ಕ್ಷೇತ್ರವು ಭಾರತೀಯ ಜನತಾ ಪಕ್ಷ (ಬಿಜೆಪಿ), ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನಡುವೆ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.