ನವದೆಹಲಿ: ಬಿಹಾರದಲ್ಲಿ ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್ ) ಬಾಧಿಸಿ 120ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿರುವ ಮಹಾಮಾರಿ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಭಾನುವಾರ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್, ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಮತ್ತು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಸಭೆ ಸೇರಿದ್ದರು.ಗಂಭೀರ ವಿಷಯದ ಚರ್ಚೆ ನಡೆಯುತ್ತಿದ್ದ ವೇಳೆ ಮಂಗಲ್ ಪಾಂಡೆ ಎಷ್ಟು ವಿಕೆಟ್ ಹೋಯ್ತು? ಎಂದು ಕೇಳಿದ್ದಾರೆ. ಆಗ ಆ ಕಡೆಯಿಂದ ನಾಲ್ಕು ವಿಕೆಟ್ ಹೋಯ್ತು ಎಂಬ ಉತ್ತರ ಬಂದಿದೆ.
ರಾಜ್ಯದಲ್ಲಿ ಎಇಎಸ್‌ನಿಂದಾಗಿ ಮಕ್ಕಳು ಸಾವಿಗೀಡಾಗುತ್ತಿದ್ದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಆರೋಗ್ಯ ಸಚಿವರು ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ತಲೆಕೆಡಿಸಿಕೊಂಡಿರುವುದರ ಬಗ್ಗೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗುತ್ತಿದಂತೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇಲ್ಲಿನ ಮುಜಾಫರ್‌ಪುರ್‌ನಲ್ಲಿ ಎನ್ಸಿಫಾಲಿಟೆಸ್‌ನಿಂದಾಗಿ ಸಾವಿಗೀಡಾದವರ ಸಂಖ್ಯೆ 104ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 80ಕ್ಕಿಂತಲೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದು, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 17 ಮಂದಿ ಸಾವಿಗೀಡಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳು ಇಲ್ಲ ಎಂದು ಹಲವಾರು ಕುಟುಂಬಗಳು ಆರೋಪಿಸಿವೆ, ಭಾನುವಾರ ಸಚಿವ ಹರ್ಷವರ್ಧನ್ ಅವರು ಶ್ರೀಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ರೋಗಿಗಳು ಕುಟುಂಬದವರು ಪ್ರತಿಭಟನೆಯ ದನಿ ಎತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.