ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಇಂದು (ಶನಿವಾರ) ನಡೆದ ಹಿಂಸಾಚಾರದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಬಿಷ್ಣುಪುರ ಜಿಲ್ಲೆಯಲ್ಲಿ ಉಗ್ರರು ನಡೆಸಿದ ರಾಕೆಟ್ ದಾಳಿಗೆ ಭದ್ರತಾ ಪಡೆಗಳು ತಿರುಗೇಟು ನೀಡಿದ್ದು, ಚುರ್‌ಚಂದಪುರ ಜಿಲ್ಲೆಯಲ್ಲಿ ಉಗ್ರರಿಗೆ ಸೇರಿದ 3 ಬಂಕರ್‌ಗಳನ್ನು ಸೇನಾಪಡೆಗಳು ಧ್ವಂಸಗೊಳಿಸಿವೆ.
ಉಗ್ರರು ನಡೆಸಿದ ರಾಕೆಟ್ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಜಿರಿಬಾಮ್ ಜಿಲ್ಲೆಯಲ್ಲಿ ಎರಡು ಸಮುದಾಯಗಳ ಜನರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿಯನ್ನು ನಿದ್ದೆಯಲ್ಲಿದ್ದಾಗ ಗುಂಡಿಕ್ಕಿ ಕೊಲ್ಲಲಾಗಿದ್ದು, ಇತರ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 5 ಕಿ.ಮೀ ದೂರದ ಪ್ರತ್ಯೇಕ ಸ್ಥಳದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ನುಗ್ಗಿದ ಉಗ್ರರು ವ್ಯಕ್ತಿ ನಿದ್ದೆಯಲ್ಲಿದ್ದಾಗ ಗುಂಡಿಟ್ಟು ಕೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಉಗ್ರರು ದಾಳಿ ನಡೆಸಿದ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ಕೂಂಬಿಂಗ್ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.