ನವದೆಹಲಿ: ಮಣಿಪುರದ ನಿಷೇಧಿತ ಉಗ್ರ ಸಂಘಟನೆ ಕಾಂಗ್ಲಿಪಾಕ್ ಕಮ್ಯುನಿಷ್ಟ್ ಪಾರ್ಟಿಯ (ಕೆಸಿಪಿ–ಪಿಡಬ್ಲ್ಯುಜಿ) ಸದಸ್ಯ ಹಾಗೂ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಬೇಕಾಗಿದ್ದ ಉಗ್ರನೊಬ್ಬನನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.
ಮೊಯಿರಾಂಗ್‌ಥೆಮ್ ರಾಣಾ ಪ್ರತಾಪ್ ಅಲಿಯಾಸ್ ಪೈಖೊಂಬಾ ಬಂಧಿತ ಉಗ್ರ. ಈತ ಕೆಸಿಪಿ–ಪಿಡಬ್ಲ್ಯುಜಿ ಸಂಘಟನೆಯ ಸ್ವಘೋಷಿತ ಪ್ರಧಾನ ಕಾರ್ಯದರ್ಶಿಯಾಗಿದ್ದ. ಈತನ ಸುಳಿವು ನೀಡಿದವರಿಗೆ ಎನ್‌ಐಎ ₹2 ಲಕ್ಷ ಇನಾಮು ಘೋಷಿಸಿತ್ತು.
ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಬೆದರಿಕೆ ಹಾಕಿ ಅವರನ್ನು ಸುಲಿಗೆ ಮಾಡುತ್ತಿದ್ದ ಆರೋಪ ಇವನ ಮೇಲಿತ್ತು. ಉಗ್ರನನ್ನು ಸೆ.4ರಂದು ಬಿಷ್ಣುಪುರ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ವಿಶೇಷ ಪೊಲೀಸ್ ಘಟಕದ ಡಿಸಿಪಿ ಸಂಜೀವ್ ಕುಮಾರ್ ಯಾದವ್ ಶನಿವಾರ ತಿಳಿಸಿದ್ದಾರೆ.
ಈ ಉಗ್ರನ ನಾಯಕ ಮತ್ತು ಕೆಸಿಪಿ–ಪಿಡಬ್ಲ್ಯುಜಿ ಸಂಘಟನೆಯ ಸ್ವಘೋಷಿತ ಮುಖ್ಯಸ್ಥ ಒಯಿನಮ್ ಇಬೊಚೌಬ ಸಿಂಗ್ ಅಲಿಯಾಸ್ ಖೋಯಿರಂಗ್ಬಾ ಎಂಬಾತನನ್ನು ಇದೇ ಆಗಸ್ಟ್ 28ರಂದು ದಕ್ಷಿಣ ದೆಹಲಿಯ ಕೋಟ್ಲಾ ಮುಬಾರಕ್‌ಪುರದಲ್ಲಿ ಬಂಧಿಸಲಾಗಿತ್ತು. ಖೋಯಿರಂಗ್ಬಾ ನಿರ್ದೇಶನದಂತೆಯೇ ಪೈಖೊಂಬಾ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ. ಇವರು ಮಣಿಪುರದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಮತ್ತು ಕೆಲವು ಸಚಿವರಿಗೂ ಬೆದರಿಕೆ ಹಾಕಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.
ಉಗ್ರ ಸಂಘಟನೆಯ ಸ್ವಘೋಷಿತ ಸಂಚಾಲಕ ರಂಜಿತ್ ಸಿಂಗ್ ಪೊರಾಜ್ ಅಲಿಯಾಸ್ ರಾಕಿ ಎಂಬಾತನನ್ನು 2017ರ ಜನವರಿಯಲ್ಲಿ ಮತ್ತು ಇದೇ ಸಂಘಟನೆಗೆ ಸೇರಿದ ಮತ್ತೊಬ್ಬ ಪ್ರಮುಖ ಉಗ್ರ ಲೈಶ್ರಮ್ ರಂಜಿತ್ ಮಿತೈ ಎಂಬಾತನನ್ನು ಆಗಸ್ಟ್‌ನಲ್ಲಿ ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.