ಇಂಫಾಲ: ‘ಮಣಿಪುರದಲ್ಲಿ ಕುಕಿ ಬುಡಕಟ್ಟು ಜನರಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸುವ ಯಾವುದೇ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿಲ್ಲ’ ಎಂದು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಚಿನ್, ಕುಕಿ, ಮಿಜೊ ಮತ್ತು ಜೋಮಿ ಬುಡಕಟ್ಟು ಜನರು ಹೆಚ್ಚಿರುವ ಜಿಲ್ಲೆಗಳಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆ ರೂಪಿಸುವಂತೆ ಕುಕಿ ಸಮುದಾಯ ಪ್ರತಿನಿಧಿಸುವ ಆಡಳಿತರೂಢ ಬಿಜೆಪಿಯ ಏಳು ಶಾಸಕರು ಸೇರಿದಂತೆ ಒಟ್ಟು 10 ಶಾಸಕರು ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದ್ದರು.
ಇದಕ್ಕೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಮಣಿಪುರದ ಸಮಗ್ರತೆಗೆ ಯಾವುದೇ ಬೆದರಿಕೆ ಇಲ್ಲ. ಶತಾಯಗತಾಯವಾಗಿ ರಾಜ್ಯದ ಏಕತೆ ಕಾಪಾಡಲು ಸರ್ಕಾರ ಬದ್ಧವಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಂಡಿದೆ. ಇದಕ್ಕೆ ಕೇಂದ್ರವೂ ಸಹಕರಿಸುತ್ತಿದೆ. ಹಾಗಾಗಿ, ಶಾಸಕರ ಬೇಡಿಕೆಗೆ ಮನ್ನಣೆ ನೀಡುವುದಿಲ್ಲ’ ಎಂದು ಘೋಷಿಸಿದರು.
‘ನಾನು ಸೇರಿದಂತೆ ಮೂವರು ಸಚಿವರು, ರಾಜ್ಯಸಭಾ ಸದಸ್ಯರು ದೆಹಲಿಯಲ್ಲಿ ಭಾನುವಾರ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದ ಸದ್ಯದ ಸ್ಥಿತಿಗತಿ ಕುರಿತು ವಿವರಿಸಿದ್ದೇವೆ. ಮಣಿಪುರದ ಜನರ ಮನಸ್ಥಿತಿ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಸ್ತ್ರಸಜ್ಜಿತ ಬಂಡುಕೋರರು ಹಿಂಸಾಚಾರದಲ್ಲಿ ಭಾಗಿಯಾಗಿರುವ ಬಗ್ಗೆಯೂ ಚರ್ಚಿಸಿದ್ದೇವೆ’ ಎಂದರು.
ಹಿಂಸಾಚಾರದಿಂದ ಹಲವು ಅಮಾಯಕರು ಜೀವತೆತ್ತಿದ್ದಾರೆ. ಅಪಾರ ಪ್ರಮಾಣದ ಸ್ವತ್ತುಗಳು ನಾಶವಾಗಿವೆ. ಸಂತ್ರಸ್ತರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರ ಸಿದ್ಧವಿದೆ. ಜನರು ಧರಣಿ ಅಥವಾ ಯಾತ್ರೆ ಹಮ್ಮಿಕೊಳ್ಳಬಾರದು. ವದಂತಿಗಳಿಗೆ ಕಿವಿಗೊಡಬಾರದು. ನಾಗರಿಕ ಸಂಘ–ಸಂಸ್ಥೆಗಳೂ ಶಾಂತಿ ನೆಲೆಸಲು ಸಹಕರಿಸಬೇಕು ಎಂದು ಕೋರಿದರು.
ಹಿಂಸಾಚಾರದ ವೇಳೆ ಕೆಲವು ಗುಂಪುಗಳು ಹೆದ್ದಾರಿಗಳಲ್ಲಿ ಸಂಚಾರ ಬಂದ್ ಮಾಡಿದ್ದವು. ಇದರಿಂದ ನಾಗರಿಕರಿಗೆ ತೊಂದರೆಯಾಗಿದೆ. ಆದರೆ, ತಪ್ಪಿತಸ್ಥರ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದರು.
ಮತ್ತೆ ಗುಂಡಿನ ದಾಳಿ: 10 ಮನೆಗಳು ಭಸ್ಮ
ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಸರ್ಕಾರ ಹರಸಾಹಸಪಡುತ್ತಿರುವ ಬೆನ್ನಲ್ಲೇ ಶನಿವಾರ ರಾತ್ರಿ ಕೆಲವೆಡೆ ಮತ್ತೆ ಘರ್ಷಣೆ ಸಂಭವಿಸಿದೆ.
ಬಿಷ್ಣುಪುರ ಜಿಲ್ಲೆಯ ತೋರ್ಬಂಗ್ ಪ್ರದೇಶದಲ್ಲಿ ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದ್ದು, 10 ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರದಲ್ಲಿ ಇಲ್ಲಿಯವರೆಗೆ 73 ಜನರು ಮೃತಪಟ್ಟಿದ್ದು, 231 ಮಂದಿ ಗಾಯಗೊಂಡಿದ್ದಾರೆ. ಧಾರ್ಮಿಕ ಸ್ಥಳಗಳು ಸೇರಿದಂತೆ 1,700 ಮನೆಗಳಿಗೆ ಹಾನಿಯಾಗಿದೆ. ಸೇನೆ ಮತ್ತು ಅರೆಸೇನಾ ಪಡೆಯ 10 ಸಾವಿರಕ್ಕೂ ಹೆಚ್ಚು ಯೋಧರು ಹಿಂಸಾಚಾರ ಪೀಡಿತ ನೆಲದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಕರ್ಫ್ಯೂ, ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆಗೆ ವಿಧಿಸಿರುವ ನಿರ್ಬಂಧ ಮುಂದುವರಿದಿದೆ.
ಕುಕಿ, ಮೈತೇಯಿ ಬಂಡುಕೋರರ ಕೈವಾಡ ಶಂಕೆ
ಮಣಿಪುರದಲ್ಲಿ ಹಿಂಸಾಚಾರ ಭುಗಿಲೇಳಲು ಕುಕಿ ಮತ್ತು ಮೈತೇಯಿ ಬಂಡುಕೋರರ ಕೈವಾಡ ಇರುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ಸೇನೆ ಶಂಕೆ ವ್ಯಕ್ತಪಡಿಸಿವೆ.
‘ಸೇನೆ ಮತ್ತು ಸ್ಥಳೀಯ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಹಿಂಸಾಚಾರ ಪೀಡಿತ ಸ್ಥಳಗಳಲ್ಲಿ ಕುಕಿ ಬಂಡುಕೋರರಿಗೆ ಸೇರಿದ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದು ಇದಕ್ಕೆ ಪುಷ್ಟಿ ನೀಡಿದೆ’ ಎಂದು ಮುಖ್ಯಮಂತ್ರಿ ಬೀರೇನ್ ಸಿಂಗ್ ತಿಳಿಸಿದ್ದಾರೆ.
‘ಹಿಂಸಾಚಾರ ಉಲ್ಬಣಕ್ಕೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಬಳಸಿದವರ ವಿರುದ್ಧ ಸರ್ಕಾರ ಕಠಿಣ ಜರುಗಿಸಲಿದೆ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದೆಡೆ ಶಾಂತಿ ಮಾತುಕತೆಯಿಂದ ಮೈತೇಯಿ ಬಂಡುಕೋರರ ಗುಂಪುಗಳು ಹೊರಗುಳಿದಿವೆ. ಹಾಗಾಗಿ, ಹಿಂಸಾಚಾರದಲ್ಲಿ ಈ ಗುಂಪುಗಳ ಕೈವಾಡ ಇರುವ ಬಗ್ಗೆ ಸೇನೆಯು ಶಂಕಿಸಿದೆ.
25ಕ್ಕೂ ಹೆಚ್ಚು ಕುಕಿ ಬಂಡುಕೋರರ ಗುಂಪು ಸಕ್ರಿಯ
ಮಣಿಪುರದಲ್ಲಿ 25ಕ್ಕೂ ಹೆಚ್ಚು ಕುಕಿ ಬಂಡುಕೋರರ ಗುಂಪುಗಳು ಸಕ್ರಿಯವಾಗಿವೆ. 2008ರಿಂದಲೂ ಸರ್ಕಾರದ ವಿರುದ್ಧ ಗುಪ್ತವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಬಂಡುಕೋರರು ಪ್ರತ್ಯೇಕ ಶಿಬಿರಗಳಲ್ಲಿ ನೆಲೆಗೊಂಡಿದ್ದಾರೆ. ಸರ್ಕಾರದ ಜೊತೆಗಿನ ಒಪ್ಪಂದದ ಅನ್ವಯ ಇವರ ಬಗೆಗಿನ ಮಾಹಿತಿ ಮತ್ತು ಶಸ್ತ್ರಾಸ್ತ್ರಗಳನ್ನು ಸರ್ಕಾರದ ವಶಕ್ಕೆ ನೀಡಿದ್ದಾರೆ.
‘ಸೇನೆ ಸೇರಿದಂತೆ ಇತರ ಭದ್ರತಾ ಪಡೆಯ ಅಧಿಕಾರಿಗಳು ಬಂಡುಕೋರರು ನೆಲೆಸಿರುವ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿ ಅವರು ಇರುವರೇ ಅಥವಾ ಬೇರೆಡೆ ತೆರಳಿದ್ದಾರೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹಿಂಸಾಚಾರದ ವೇಳೆ ಭದ್ರತಾ ಪಡೆಗಳಿಗೆ ಸೇರಿದ ಒಂದು ಸಾವಿರಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ಕಿಡಿಗೇಡಿಗಳು ಲೂಟಿ ಮಾಡಿದ್ದು, ಈ ಪೈಕಿ ಅರ್ಧದಷ್ಟನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.