ADVERTISEMENT

ರಾಷ್ಟ್ರೀಯ ಪೌರತ್ವ ನೋಂದಣಿಗೆ ಕುಕಿ ಸಮುದಾಯದ ಬೆಂಬಲ ಸ್ವಾಗತಿಸಿದ ಮಣಿಪುರ CM

ಪಿಟಿಐ
Published 11 ಜುಲೈ 2024, 15:04 IST
Last Updated 11 ಜುಲೈ 2024, 15:04 IST
<div class="paragraphs"><p>ಬಿರೇನ್ ಸಿಂಗ್</p></div>

ಬಿರೇನ್ ಸಿಂಗ್

   

ಪಿಟಿಐ ಚಿತ್ರ

ಇಂಫಾಲ: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೆ ಕುಕಿ ಬುಡಕಟ್ಟು ಸಮುದಾಯದ ಸಂಘಟನೆಯಾದ ಕುಕಿ ಇಂಪಿ ಮಣಿಪುರ (ಕೆಐಎಂ) ಬೆಂಬಲ ವ್ಯಕ್ತಪಡಿಸಿರುವುದನ್ನು ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸ್ವಾಗತಿಸಿದ್ದಾರೆ.

ADVERTISEMENT

ಹಲವು ವಿಷಯಗಳಲ್ಲಿ ಸರ್ಕಾರದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಿದ್ದ ಕೆಐಎಂ ಸಂಘಟನೆಯು ಎನ್ಆರ್‌ಸಿ ಕುರಿತು ಕಳೆದ ವಾರ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿತ್ತು. ‘ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆ ಹಾಗೂ ಬುಡಕಟ್ಟು ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎನ್‌ಆರ್‌ಸಿ ಅನುಷ್ಠಾನಗೊಳಿಸಿದರೆ ಅದಕ್ಕೆ ನಮ್ಮ ವಿರೋಧವಿಲ್ಲ’ ಎಂದಿತ್ತು.

ಇದನ್ನು ಸ್ವಾಗತಿಸಿರುವ ಬಿರೇನ್ ಸಿಂಗ್, ‘ನಿಮ್ಮ ಬೇಡಿಕೆಗಳ ಕುರಿತು ನಮ್ಮ ಹಂತದಲ್ಲೇ ಚರ್ಚಿಸೋಣ. ಒಂದೊಮ್ಮೆ ನಿಮಗೆ ನನ್ನೊಂದಿಗೆ ಮಾತನಾಡಲು ಇಷ್ಟವಿಲ್ಲ ಎಂದಾದರೆ, ಕೇಂದ್ರ ಸರ್ಕಾರವನ್ನೇ ಸಂಪರ್ಕಿಸಿ’ ಎಂದಿದ್ದಾರೆ.

ಮ್ಯಾನ್ಮಾರ್‌ನಿಂದ ಕೆಲವರು ಅಕ್ರಮವಾಗಿ ದೇಶದೊಳಗೆ ನುಸುಳಿರುವ ಶಂಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯಕ್ತಪಡಿಸಿದ್ದವು. ಇವರಿಂದಲೇ ಕುಕಿ ಮತ್ತು ಮೈತೇಯಿ ಜನಾಂಗೀಯ ಹಿಂಸಾಚಾರದಿಂದ 200ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ ಎಂದು ಸರ್ಕಾರ ಆರೋಪಿಸಿತ್ತು.

ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿರೇನ್, ‘ಸಮುದಾಯಗಳ ನಡುವಿನ ಸಂಘರ್ಷಕ್ಕೆ ಎನ್‌ಆರ್‌ಸಿ ಒಂದೇ ಮದ್ದಾಗಿದೆ. ಇದಕ್ಕೆ ಎಲ್ಲರೂ ಒಪ್ಪಿಕೊಂಡರೆ ಜನರು ಏಕೆ ಸಂಕಷ್ಟ ಎದುರಿಸಬೇಕು’ ಎಂದಿದ್ದಾರೆ.

‘ಈಶಾನ್ಯ ರಾಜ್ಯದಲ್ಲಿ ಅರಣ್ಯ ನಾಶ, ಅಕ್ರಮ ನುಸುಳುವಿಕೆ ಹಾಗೂ ಮಾದಕ ದ್ರವ್ಯ ಬಳಕೆಗಾಗಿ ಅಕ್ರಮವಾಗಿ ನಡೆಸುವ ಗಸಗಸೆ ಕೃಷಿಯನ್ನು ಸಂಪೂರ್ಣವಾಗಿ ನಿಲ್ಲಿಸುವುದೇ ನನ್ನ ಉದ್ದೇಶ. ರಾಜ್ಯದಲ್ಲಿ ಶಾಂತಿ ಅಗತ್ಯ. ಹೀಗಾಗಿ ಮೂಲ ಸಮಸ್ಯೆಯನ್ನು ಪರಿಹರಿಸುವುದೇ ಅದಕ್ಕಿರುವ ಮದ್ದು. ಇದನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲು ಸರ್ವ ಪ್ರಯತ್ನ ನಡೆಸಲಾಗುವುದು. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಸಂಘರ್ಷದಲ್ಲಿ ನೊಂದ ಕುಟುಂಬಗಳಿಗೆ ಸರ್ಕಾರ ನೀಡುವ ನೆರವು ಮತ್ತು ಶಿಕ್ಷಣದಿಂದ ಅವರ ಏಳಿಗೆ ಸಾಧ್ಯ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.