ಇಂಫಾಲ್: ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಣಿಪುರ ಕಾಂಗ್ರೆಸ್ ಬುಧವಾರ ಮನವಿ ಮಾಡಿದೆ.
ಮಣಿಪುರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಂಗಳವಾರ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಚಿದಂಬರಂ, ಪ್ರಾದೇಶಿಕ ಸ್ವಾಯತ್ತತೆ ಬಗ್ಗೆ ಮಾತನಾಡಿದ್ದರು. ಪೋಸ್ಟ್‌ಗೆ ವಿರೋಧ ವ್ಯಕ್ತವಾಗುತ್ತಲೇ ಅದನ್ನು ಅಳಿಸಿ ಹಾಕಿದ್ದರು.
ಚಿದಂಬರಂ ಪೋಸ್ಟ್ ಕುರಿತು ಖರ್ಗೆಗೆ ಪತ್ರ ಬರೆದಿರುವ ಕಾಂಗ್ರೆಸ್ ಮುಖಂಡರು, ‘ಮಣಿಪುರ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಚಿದಂಬರಂ ಅವರ ಅಭಿಪ್ರಾಯವನ್ನು ನಾವು ಸರ್ವಾನುಮತದಿಂದ ಖಂಡಿಸುತ್ತೇವೆ. ರಾಜ್ಯದ ಏಕತೆ ಮತ್ತು ಸಮಗ್ರತೆಗೆ ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.
ಚಿದಂಬರಂ ಹೇಳಿದ್ದೇನು?
‘5 ಸಾವಿರಕ್ಕೂ ಹೆಚ್ಚು ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸುವುದು ಮಣಿಪುರ ಬಿಕ್ಕಟ್ಟಿಗೆ ಪರಿಹಾರವಲ್ಲ. ಬಿಕ್ಕಟ್ಟಿಗೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಕಾರಣವೆಂದು ಒಪ್ಪಿಕೊಂಡು ಅವರನ್ನು ಆ ಸ್ಥಾನದಿಂದ ತೆಗೆದು ಹಾಕಬೇಕು’ ಎಂದು ಚಿದಂಬರಂ ಹೇಳಿದ್ದರು.
ಅಲ್ಲದೇ, ಮೈತೇಯಿ, ಕುಕಿ ಮತ್ತು ನಾಗಾ ಸಮುದಾಯಗಳು ಪ್ರಾದೇಶಿಕ ಸ್ವಾಯತ್ತತೆ ಹೊಂದಿದ್ದರೆ ಮಾತ್ರ ಒಂದೇ ರಾಜ್ಯದಲ್ಲಿ ಒಟ್ಟಿಗೆ ಬದುಕಲು ಸಾಧ್ಯ ಎಂದು ಪ್ರತಿಪಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.