ADVERTISEMENT

ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ರಾಹುಲ್ ಗಾಂಧಿ ಸೋಮವಾರ ಭೇಟಿ

ಪಿಟಿಐ
Published 7 ಜುಲೈ 2024, 11:21 IST
Last Updated 7 ಜುಲೈ 2024, 11:21 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ಇಂಫಾಲ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಾಳೆ (ಸೋಮವಾರ) ಭೇಟಿ ನೀಡಲಿದ್ದು, ಅಲ್ಲಿನ ಸಂತ್ರಸ್ತರೊಂದಿಗೆ ಸಂವಾದ ನಡೆಸಲಿದ್ದಾರೆ.

ADVERTISEMENT

ಮಣಿಪುರದ ಜಿರಿಬಾಮ್‌, ಚುರಾಚಂದ್‌ಪುರ ಮತ್ತು ಇಂಫಾಲ್‌ ಜಿಲ್ಲೆಗಳಿಗೆ ರಾಹುಲ್‌ ಭೇಟಿ ನೀಡಲಿದ್ದು, ದಿನವಿಡೀ ರಾಜ್ಯದ ಜನರೊಂದಿಗೆ ಸಮಯ ಕಳೆಯಲಿದ್ದಾರೆ.

ರಾಹುಲ್‌ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕುರಿತು ಮಣಿಪುರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೀಶಮ್‌ ಮೇಘಚಂದ್ರ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಓ ಇಬೋಬಿ ಸಿಂಗ್‌, ಸಂಸದರಾದ ಅಂಗೋಮಚ ಬಿಮಲ್ ಅಕೋಯ್‌ಜಾಮ್ ಹಾಗೂ ಆಲ್ಫ್ರೆಡ್ ಕನ್ನಗಾಮ್ ಅರ್ಥುರ್ ಮತ್ತು ಗಿರೀಶ್‌ ಚೋಡಂಕರ್‌ ಅವರು ಇಂದು (ಭಾನುವಾರ) ಸಭೆ ಸೇರಿ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ನೆಲೆಸುವುದು ಮುಖ್ಯವಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ರಾಜ್ಯಕ್ಕೆ ಭೇಟಿ ನೀಡಲು ಆಯ್ಕೆ ಮಾಡಿರುವುದಕ್ಕೆ ರಾಹುಲ್‌ ಗಾಂಧಿ ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದ್ದಾರೆ.

ರಾಹುಲ್‌ ಅವರು ರಾಷ್ಟ್ರ ರಾಜಧಾನಿ ದೆಹಲಿಯಿಂದ ಸಿಲ್ಚಾರ್‌ಗೆ ವಿಮಾನದ ಮೂಲಕ ಪ್ರಯಾಣಿಸಲಿದ್ದಾರೆ. ಬಳಿಕ ಜೂನ್‌ 6ರಂದು ಹಿಂಸಾಚಾರ ನಡೆದ ಜಿರಿಬಾಮ್‌ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಕೆಲವು ನಿರಾಶ್ರಿತರ ಶಿಬಿರಗಳಿಗೆ ತೆರಳಿ ಜನರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಸಿಲ್ಚಾರ್‌ ವಿಮಾನ ನಿಲ್ದಾಣಕ್ಕೆ ಹಿಂದಿರುಗಲಿದ್ದು, ಅಲ್ಲಿಂದ ಇಂಫಾಲಗೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮೇಘಚಂದ್ರ ತಿಳಿಸಿದ್ದಾರೆ.

ಇಂಫಾಲದಿಂದ ಚುರಾಚಂದ್‌ಪುರ ಜಿಲ್ಲೆಗೆ ತೆರಳಲಿರುವ ಅವರು, ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಆ ಬಳಿಕ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ಗೆ ತೆರಳಿ ಅಲ್ಲಿನ ಕೆಲವು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ. ನಂತರ ಇಂಫಾಲಗೆ ಹಿಂದಿರುಗಲಿರುವ ಅವರು ರಾಜ್ಯಪಾಲೆ ಅನುಸೂಯ ಉಯಿಕೆ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಲೋಕಸಭೆ ಚುನಾವಣೆಯ ನಂತರ ಮಣಿಪುರಕ್ಕೆ ರಾಹುಲ್‌ ಅವರ ಮೊದಲ ಭೇಟಿ ಇದಾಗಿದ್ದು, ಜನಾಂಗೀಯ ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಕಾಂಗ್ರೆಸ್ ಎರಡೂ ಕ್ಷೇತ್ರಗಳನ್ನು ಗೆದ್ದಿದೆ.

ಮಣಿಪುರಕ್ಕೆ ರಾಹುಲ್‌ ಗಾಂಧಿ ಅವರು ಭೇಟಿ ನೀಡುತ್ತಿರುವ ಬೆನ್ನಲ್ಲೇ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.