ಗುವಾಹಟಿ: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೋರೆಹ್‌ನಲ್ಲಿ ನಡೆದಿದ್ದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕಿ ಸಮುದಾಯದ ಇಬ್ಬರು ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ, ಮಣಿಪುರದ ತೆಂಗ್‌ನೌಪಾಲ್ ಜಿಲ್ಲೆಯಲ್ಲಿ, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ.
ಈ ಇಬ್ಬರ ಬಂಧನದ ಬಳಿಕ ಕುಕಿ ಸಮುದಾಯದ ಮಹಿಳೆಯರ ಗುಂಪು ಸೋಮವಾರ ಮೊರೆಹ್‌ನ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿತು. ಬಂಧನದಲ್ಲಿರುವ ಫಿಲಿಪ್ ಖೈಖೋಲಾಯ್ ಖೋಂಗ್‌ಸಾಯ್ ಮತ್ತು ಹೆಮ್ಖೋಲಾಯ್ ಮೇಟ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತು.
ಕಳೆದ ಅಕ್ಟೋಬರ್ 31ರಂದು ಮೊರೆಹ್‌ನಲ್ಲಿ ಚಿಂಗ್ತಮ್ ಆನಂದ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದ ಮುಖ್ಯ ಶಂಕಿತರಲ್ಲಿ ಇವರಿಬ್ಬರೂ ಸೇರಿದ್ದಾರೆ ಎಂದು ಮಣಿಪುರ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
ಮೊರೆಹ್‌ನಲ್ಲಿ ಪೊಲೀಸ್ ಗಸ್ತು ತಂಡದ ಮೇಲೆ ಈ ಇಬ್ಬರು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದಾಗ, ಅವರನ್ನು ಬಂಧಿಸಲಾಯಿತು. ಅವರಿಂದ ಒಂದು ಪಿಸ್ತೂಲ್, ಚೀನಾ ನಿರ್ಮಿತ ಹ್ಯಾಡ್ ಗ್ರೆನೇಡ್ ಮತ್ತು ಕೆಲ ಮುದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೈತೇಯಿ ಸಮುದಾಯಕ್ಕೆ ಸೇರಿದ ಆನಂದ್ ಕುಮಾರ್ ಹತ್ಯೆಯ ಬಳಿಕ, ಈ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಆ ಸಮುದಾಯದಿಂದ ಒತ್ತಾಯ ಕೆಳಿಬಂದಿತ್ತು. ಈ ಪ್ರಕರಣದಲ್ಲಿ ಬಂಧಿಸಿರುವ ಇಬ್ಬರ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ಹಲವರು ಇಂಫಾಲ್‌ನಲ್ಲಿ ಪ್ರತಿಭಟನೆಯನ್ನೂ ನಡೆಸಿದರು.
ಈ ಆರೋಪಿಗಳ ಬಂಧನದ ತರುವಾಯ ತೆಂಗ್‌ನೌಪಾಲ್ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ, ಜಿಲ್ಲಾಡಳಿತ ಪುನಃ ಕರ್ಫ್ಯೂ ಹೇರಿ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.