ADVERTISEMENT

ಮಣಿಪುರದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯ: ಭದ್ರತಾ ಸಂಸ್ಥೆ ಎಚ್ಚರಿಕೆ

ಪಿಟಿಐ
Published 11 ಸೆಪ್ಟೆಂಬರ್ 2023, 15:39 IST
Last Updated 11 ಸೆಪ್ಟೆಂಬರ್ 2023, 15:39 IST
ಭಯೋತ್ಪಾದಕ
ಭಯೋತ್ಪಾದಕ   

ನವದೆಹಲಿ/ಇಂಫಾಲ್‌ : ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಯುನೈಟೆಡ್‌ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌ (ಯುಎನ್‌ಎಲ್‌ಎಫ್‌) ಮತ್ತು ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ಮಣಿಪುರದಲ್ಲಿ ಸಕ್ರಿಯವಾಗಿದ್ದು, ಈಚೆಗೆ ಸೇನಾಧಿಕಾರಿ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಇವುಗಳ ಕೈವಾಡವಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಗಲಭೆಪೀಡಿತ ಮಣಿಪುರ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನಾ ಮೆರವಣಿಗೆಯೊಳಗೆ ಈ ಸಂಘಟನೆಗಳ ಉಗ್ರರು ನುಸುಳಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆ ಇದೆ ಎಂದು ಕೇಂದ್ರ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

ತೆಂಗ್ನೌಪಾಲ್ ಜಿಲ್ಲೆಯ ಪಲ್ಲೇಲ್‌ನಲ್ಲಿ ಈಚೆಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮತ್ತು ಭದ್ರತಾ ಪಡೆ ಯೋಧರ ನಡುವೆ ನಡೆದ ಗುಂಡಿನ ಚಕಮಕಿಯ ವೇಳೆ ಸೇನೆಯ ಲೆಫ್ಟಿನೆಂಟ್‌ ಕರ್ನಲ್‌ ರಮಣ್‌ ತ್ಯಾಗಿ ಗಾಯಗೊಂಡಿದ್ದರು. ತ್ಯಾಗಿ ಅವರನ್ನು ಹೆಲಿಕಾಪ್ಟರ್‌ ಮೂಲಕ ಗುವಾಹಟಿಗೆ ಕರೆದೊಯ್ದು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ADVERTISEMENT

ಸದ್ಯ ಯುಎನ್‌ಎಲ್ಎಫ್‌ ಸಂಘಟನೆಯಲ್ಲಿ 330, ಪಿಎಲ್‌ಎಯಲ್ಲಿ 300 ಹಾಗೂ ಕೆವೈಕೆಎಲ್‌ ಸಂಘಟನೆಯಲ್ಲಿ 25 ಮಂದಿ ಉಗ್ರರಿದ್ದಾರೆ ಎಂದು ತಿಳಿಸಿದ್ದಾರೆ.

ಕೆವೈಕೆಎಲ್‌ ಸಂಘಟನೆಯ ಸ್ವಘೋಷಿತ ಲೆಫ್ಟಿನೆಂಟ್‌ ಕರ್ನಲ್‌ ಮೊಯಿರಂಗತೆಂ ತಾಂಬಾ ಅಲಿಯಾಸ್ ಉತ್ತಮ್ ಸೇರಿದಂತೆ 12 ಮಂದಿಯನ್ನು ಜೂನ್‌ 24ರಂದು ಸೇನೆ ಮತ್ತು ಅಸ್ಸಾಂ ರೈಫಲ್ಸ್‌ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.

ಗುತ್ತಿಗೆದಾರರು ಮತ್ತು ಉದ್ಯಮಿಗಳನ್ನು ಸುಲಿಗೆ ನಡೆಸಿರುವ ಪ್ರಕರಣಗಳಲ್ಲಿ ಯುಎನ್‌ಎಲ್‌ಎಫ್‌ ಸಂಘಟನೆಯ ಸದಸ್ಯರು ಈ ಹಿಂದೆ ಶಾಮೀಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.