ಇಂಫಾಲ: ಮಣಿಪುರದ ಕುಂಬಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲ್ವರು ಉರುವಲು( ಕಟ್ಟಿಗೆ) ಸಂಗ್ರಹಿಸಲು ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಿಷ್ಣುಪುರ ಮತ್ತು ಚುರಚಂದಪುರ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಬೆಟ್ಟಗಳ ಸಮೀಪ ಉರುವಲು ಸಂಗ್ರಹಿಸಲು ತೆರಳಿದ್ದ ನಾಲ್ವರು ಬುಧವಾರ (ಜನವರಿ 10) ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ಈವರೆಗೂ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದಾರಾ ಸಿಂಗ್, ಇಬೊಮ್ಚಾ ಸಿಂಗ್, ರೋಮೆನ್ ಸಿಂಗ್ ಮತ್ತು ಆನಂದ್ ಸಿಂಗ್ ಎಂಬುವವರು ನಾಪತ್ತೆಯಾಗಿರುವವರು.
ನಾಲ್ವರು ಬಂಡುಕೋರರ ವಶದಲ್ಲಿರುವ ಸಾಧ್ಯತೆ ಇದ್ದು, ಶೋಧ ಕಾರ್ಯಾಚರಣೆಗಾಗಿ ಕೇಂದ್ರ ಸರ್ಕಾರದ ಸಹಾಯವನ್ನು ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ಬಿಷ್ಣುಪುರ್ ಜಿಲ್ಲೆಯ ಹಾತಕ್ ಗ್ರಾಮದಲ್ಲಿ ಬಂಡುಕೋರರು ಬಂದೂಕು ಮತ್ತು ಬಾಂಬ್ ದಾಳಿ ನಡೆಸಿದ್ದಾರೆ. ಈ ನಡುವೆ 100 ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ. ಸ್ಥಳದಲ್ಲಿ ಭದ್ರತಾ ಪಡೆಗಳು ಬೀಡುಬಿಟ್ಟಿದ್ದರೂ ಉದ್ವಿಗ್ನತೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.