ಮಣಿಪುರ: ರಾಜ ಭವನದ 100 ಮೀಟರ್‌ಗೂ ಕಡಿಮೆ ಅಂತರದಲ್ಲಿರುವ ಜಿಪಿ ಮಹಿಳಾ ಕಾಲೇಜಿನ ಗೇಟಿನ ಸಮೀಪ ಸೋಮವಾರ ಬೆಳಿಗ್ಗೆ ಗ್ರೆನೇಡ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ದಾರಿಹೋಕರಲ್ಲಿ ಭಯ ಹುಟ್ಟಿಸಿತ್ತು. ಗ್ರೆನೇಡ್ ಪತ್ತೆಯಾದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆ ಪ್ರದೇಶಕ್ಕೆ ಯಾರೂ ತೆರಳದಂತೆ ಕ್ರಮ ವಹಿಸಿದ್ದರು. ಬಳಿಕ ಬಾಂಬ್ ನಿಷ್ಕ್ರಿಯ ದಳವು ಬಾಂಬ್ ತೆರವುಗೊಳಿಸಿ, ನಿಷ್ಕ್ರಿಯಗೊಳಿಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜಭವನದಿಂದ 100 ಮೀಟರ್ ಮತ್ತು ಮುಖ್ಯಮಂತ್ರಿ ಅಧಿಕೃತ ನಿವಾಸ ಹಾಗೂ ಮಣಿಪುರ ಪೊಲೀಸ್ ಪ್ರಧಾನ ಕಚೇರಿಯಿಂದ 300 ಮೀಟರ್‌ಗೂ ಕಡಿಮೆ ಅಂತರದಲ್ಲಿ ಈ ಕಾಲೇಜು ಇದೆ. ಸ್ಥಳದಲ್ಲಿ ‘ಶ್ರಮಜೀವಿ ವಿದ್ಯಾರ್ಥಿಗಳಿಗೆ ಕೀರ್ತಿ’ ಎಂಬ ಕೈಬರಹವಿದ್ದ ಚೀಟಿ ಲಭ್ಯವಾಗಿದೆ. ಇಂಫಾಲ ಕಣಿವೆಯ ಹಲವು ಶಿಕ್ಷಣ ಸಂಸ್ಥೆಗಳು ಸುಲಿಗೆಗೆ ಸಂಬಂಧಿಸಿದ ಬೆದರಿಕೆಗಳ ಬಗ್ಗೆ ದೂರುತ್ತಿರುವ ವೇಳೆಯೇ ಈ ಘಟನೆ ಸಂಭವಿಸಿದೆ.
ಘಟನೆ ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಘಟನೆ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು. ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಕಾಲೇಜಿನ ವಿದ್ಯಾರ್ಥಿ ಥಾಕ್ಚೊಮ್ ಯೈಫಾಬಿ ಚಾನು ಆಗ್ರಹಿಸಿದರು. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.