ಇಂಫಾಲ: ಮಣಿಪುರದಲ್ಲಿ ಗುಂಪು ದಾಳಿಯಿಂದ ರಕ್ಷಿಸಿಕೊಳ್ಳಲು ಪೂರ್ವ ಇಂಫಾಲ ಜಿಲ್ಲೆಯ ತಮ್ಮ ಪೂರ್ವಜರ ಮನೆಗೆ ಸಚಿವರೊಬ್ಬರು ಮುಳ್ಳು ತಂತಿ ಸಹಿತ ಕಬ್ಬಿಣದ ಬೇಲಿ ಹಾಗೂ ಭದ್ರತಾ ಸಿಬ್ಬಂದಿಗೆ ಬಂಕರ್‌ಗಳನ್ನು ನಿರ್ಮಿಸಿದ್ದಾರೆ.
ಮಣಿಪುರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಎಲ್. ಸುಸಿಂದ್ರೊ ಸಿಂಗ್ ಮೈತೇಯಿಗೆ ಸೇರಿದ ಪೂರ್ವಜರ ಮನೆಯ ಮೇಲೆ ನ.16ರಂದು ಗುಂಪೊಂದು ದಾಳಿ ನಡೆಸಿತ್ತು. ಇದಾದ ಬಳಿಕ ಅವರು ಈ ಕ್ರಮ ಕೈಗೊಂಡಿದ್ದಾರೆ.
2023ರ ಮೇ 3ರಿಂದ ಮೂರನೇ ಬಾರಿ ಈ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
‘ನನ್ನ ಮನೆಯನ್ನು ರಕ್ಷಿಸಿಕೊಳ್ಳಲು ಮುಳ್ಳು ತಂತಿ ಸಹಿತ ಬೇಲಿ ನಿರ್ಮಾಣ ಮಾಡುವುದು ಅಗತ್ಯವಿತ್ತು. ನ.16ರಂದು ನಡೆದ ಪ್ರತಿಭಟನೆ ವೇಳೆ ಪ್ರತಿಭಟನಕಾರರು ಎಲೆಕ್ಟ್ರಿಕ್ ಡ್ರಿಲ್, ಸುತ್ತಿಗೆ ತಂದು ಮನೆಗೆ ಹಾನಿ ಮಾಡಿ, ದೋಚಲು ಮುಂದಾಗಿದ್ದರು’ ಎಂದು ತಿಳಿಸಿದರು.
‘ಅಂದು ನಡೆದ ಗಲಾಟೆಯಲ್ಲಿ ಹಲವು ಶಾಸಕರು ಮನೆಗಳಿಗೂ ಹಾನಿ ಮಾಡಲಾಗಿದೆ. ಅಂದು ನಾನು ಮನೆಯಲ್ಲಿ ಇರಲಿಲ್ಲ. ಮಧ್ಯಾಹ್ನದ ನಂತರ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು, ವೃದ್ಧರು ನನ್ನ ಮನೆಗೆ ಬಂದು ಕುಟುಂಬದ ಸದಸ್ಯರ ಜೊತೆ ಮಾತನಾಡಿ, ತೆರಳಿದ್ದರು. ಸಂಜೆ 6.30ರ ಸುಮಾರಿಗೆ 3 ಸಾವಿರಕ್ಕೂ ಅಧಿಕ ಮಂದಿ ನನ್ನ ಮನೆ ಮುಂದೆ ನಿಂತು ಗುಂಡಿನದಾಳಿ ನಡೆಸಿದರು. ನನ್ನ ಭದ್ರತಾ ಸಿಬ್ಬಂದಿ ಹಾಗೂ ಗಡಿಭದ್ರತಾ ಪಡೆಯವರು ಪ್ರತ್ಯುತ್ತರ ನೀಡಲು ಮುಂದಾದ ವೇಳೆ ನಾನು ತಡೆದು, ಯಾರಿಗೂ ಹಾನಿ ಮಾಡದಂತೆ ತಿಳಿಸಿದ್ದೆನು. ನಂತರ ಗಾಳಿಯಲ್ಲಿ ಗುಂಡು ಹಾರಿಸಿದ ಬಳಿಕ ಅಲ್ಲಿಂದ ತೆರಳಿದರು’ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡರು.
‘ದುಷ್ಕರ್ಮಿಗಳಿಂದ ಆಸ್ತಿಪಾಸ್ತಿ ಹಾಗೂ ಜೀವ ರಕ್ಷಿಸಿಕೊಳ್ಳಲು ಸಂವಿಧಾನತ್ಮಕ ಹಾಗೂ ಕಾನೂನಿನ ಅಡಿಯಲ್ಲಿ ಅಧಿಕಾರವಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.