ಇಂಫಾಲ್: ಜಿರೀಬಾಮ್‌ನಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳ ಸಾವಿಗೆ ಕಾರಣವಾದ ಕುಕಿ ಉಗ್ರರ ವಿರುದ್ಧ ಏಳು ದಿನಗಳ ಒಳಗಾಗಿ ‘ಬೃಹತ್ ಕಾರ್ಯಾಚರಣೆ’ಗೆ ಕರೆ ನೀಡುವ ನಿರ್ಣಯವನ್ನು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಶಾಸಕರು ನಡೆಸಿದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೋಮವಾರ ರಾತ್ರಿ ಸಭೆ ನಡೆದಿದ್ದು, 27 ಶಾಸಕರು ಭಾಗಿಯಾಗಿದ್ದರು.
ಹತ್ಯೆಗೆ ಕಾರಣವಾದ ಕುಕಿ ಉಗ್ರರ ಗುಂಪನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸಬೇಕು. ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ತಕ್ಷಣವೇ ಎನ್‌ಐಎಗೆ ವಹಿಸಬೇಕು. ರಾಜ್ಯದ ಕೆಲವೆಡೆ ‘ಆಫ್‌ಸ್ಪಾ’ ಮರುಜಾರಿಗೊಳಿಸಿರುವ ಆದೇಶವನ್ನು ಕೇಂದ್ರ ಸರ್ಕಾರ ಮರುಪರಿಶೀಲಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ನಿಗದಿತ ಕಾಲಮಿತಿ ಒಳಗಾಗಿ ಅನುಷ್ಠಾನ ಮಾಡದಿದ್ದರೆ ಎನ್‌ಡಿಎ ಶಾಸಕರು ಮುಂದಿನ ಹೆಜ್ಜೆ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಶಾಸಕರು ಮತ್ತು ಸಚಿವರಿಗೆ ಸಂಬಂಧಿಸಿದ ಪ್ರದೇಶಗಳ ಮೇಲಿನ ದಾಳಿಯನ್ನು ಖಂಡಿಸಲಾಯಿತು.
ಉನ್ನತ ಅಧಿಕಾರದ ಸಮಿತಿಯ ತನಿಖೆ ಆಧಾರದಲ್ಲಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಶಾಸಕರ ಗೈರು:
ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಗೆ ಏಳು ಶಾಸಕರು ಆರೋಗ್ಯದ ಕಾರಣ ನೀಡಿ ಗೈರಾಗಿದ್ದರು. ಕಾರಣ ನೀಡದೆ ಗೈರಾಗಿದ್ದ 11 ಶಾಸಕರಿಗೆ ನೋಟಿಸ್ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಶಾಸಕರ ಗೈರು: ‘ಕೈ’ ವಾಗ್ದಾಳಿ
ನವದೆಹಲಿ: ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಕರೆದಿದ್ದ ಸಭೆಗೆ ಎನ್‌ಡಿಎ ಶಾಸಕರು ಗೈರಾಗಿದ್ದಕ್ಕೆ ಕಾಂಗ್ರೆಸ್ ಮಂಗಳವಾರ ವಾಗ್ದಾಳಿ ನಡೆಸಿದೆ. ಮುಖ್ಯಮಂತ್ರಿ ಹೊರತಾಗಿ ಕೇವಲ 26 ಶಾಸಕರು ಭಾಗಿಯಾಗಿದ್ದರು. ಈ ಪೈಕಿ ನಾಲ್ವರು ಎನ್‌ಪಿಪಿ ಶಾಸಕರು. ಬಿರೇನ್ ಸಿಂಗ್ ಅವರ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಎನ್‌ಪಿಪಿ ಅಧ್ಯಕ್ಷರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಈಗಾಗಲೇ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಹೇಳಿದ್ದಾರೆ. ‘ಗೋಡೆ ಮೇಲಿನ ಬರಹ ಸ್ಪಷ್ಟವಾಗಿದೆ. ಆದರೆ ಮಣಿಪುರದ ಸೂತ್ರಧಾರ ಅಮಿತ್ ಶಾ ಅವರು ಅದನ್ನು ಓದಿದ್ದಾರೆಯೇ? ಮಣಿಪುರ ಜನರ ಅಸಹನೀಯ ಸಂಕಟ ಇನ್ನೆಷ್ಟು ದಿನ ಮುಂದುವರಿಯಲಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ಫ್ಯೂ ಉಲ್ಲಂಘಿಸಿ ನಡೆದ ಪ್ರತಿಭಟನೆಗೆ ತಡೆ
ಇಂಫಾಲ್ (ಪಿಟಿಐ): ಮಣಿಪುರದ ಹಲವು ಸಂಘಟನೆಗಳು ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ– 1958 (ಆಫ್‌ಸ್ಪಾ) ಮರುಜಾರಿ ವಿರೋಧಿ ಮಂಗಳವಾರ ಇಂಫಾಲ್‌ನಲ್ಲಿ ಪ್ರತಿಭಟನೆ ನಡೆಸಿದವು. ಆದರೆ ಕರ್ಫ್ಯೂ ಆದೇಶ ಧಿಕ್ಕರಿಸಿ ಪ್ರತಿಭಟಿಸಿದ ಕಾರಣ ಪೊಲೀಸರು ಕೈಸಂಪತ್/ ಜಂಕ್ಷನ್‌ನಲ್ಲಿ ಪ್ರತಿಭಟನಕಾರರನ್ನು ತಡೆದರು. ಪೊಲೀಸರು ತಡೆಯುವ ಮುನ್ನ ಕವಾಕೈಥೆಲ್ ಪ್ರದೇಶದಿಂದ ಮೂರು ಕಿ.ಮೀ ರ‍್ಯಾಲಿ ನಡೆಸಿದ್ದಾಗಿ ಪ್ರತಿಭಟನಕಾರರೊಬ್ಬರು ತಿಳಿಸಿದರು.
ಬಿರೇನ್ ರಾಜೀನಾಮೆಗೆ ಶರ್ಮಿಳಾ ಆಗ್ರಹ
ಕೋಲ್ಕತ್ತ (ಪಿಟಿಐ): ಮಣಿಪುರದಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇರ ಮಧ್ಯಪ್ರವೇಶ ಅತ್ಯಗತ್ಯ ಎಂದು ಸಾಮಾಜಿಕ ಕಾರ್ಯಕರ್ತೆ ಇರೋಮ್ ಶರ್ಮಿಳಾ ಅವರು ಅಭಿಪ್ರಾಯಪಟ್ಟಿದ್ದಾರೆ. ‘ಮಣಿಪುರದ ಉಕ್ಕಿನ ಮಹಿಳೆ’ ಎಂದೇ ಹೆಸರಾಗಿರುವ ಇರೋಮ್ ಶರ್ಮಿಳಾ ಅವರು ಪಿಟಿಐ ಸುದ್ದಿಸಂಸ್ಥೆ ಫೋನ್ ಮೂಲಕ ನಡೆಸಿದ ಸಂದರ್ಶನದಲ್ಲಿ ಮಾತನಾಡಿದರು. ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ರಾಜ್ಯದಲ್ಲಿ ಉಂಟಾಗಿರುವ ಗಲಭೆಗೆ ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ನರೇಂದ್ರ ಮೋದಿ ಅವರು ಪ್ರತಿಯೊಂದು ರಾಜ್ಯಕ್ಕೆ ಭೇಟಿ ನೀಡುತ್ತಾರೆ ಆದರೆ ಮಣಿಪುರಕ್ಕೆ ಹೋಗಿಲ್ಲ. ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನಾಯಕರು. ಸಂಘರ್ಷ ಆರಂಭವಾಗಿ 18 ತಿಂಗಳುಗಳು ಕಳೆದರೂ ಅವರು ಭೇಟಿ ನೀಡಿಲ್ಲ. ಅವರ ನೇರ ಮಧ್ಯಪ್ರವೇಶವು ಬಿಕ್ಕಟ್ಟು ಪರಿಹಾರಕ್ಕೆ ಸಹಾಯವಾಗಬಹುದು ಎಂದು ಹೇಳಿದರು. ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳ ವೈವಿಧ್ಯ ಮೌಲ್ಯ ಮತ್ತು ಆಚರಣೆಗಳನ್ನು ಕೇಂದ್ರ ಸರ್ಕಾರವು ಗೌರವಿಸುವುದರ ಮಹತ್ವವನ್ನು ಒತ್ತಿ ಹೇಳಿದರು. ಆರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ– 1958 (ಆಫ್‌ಸ್ಪಾ) ಮರು ಜಾರಿ ಮಾಡಿರುವುದು ಮತ್ತಷ್ಟು ಗಲಭೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.