ನವದೆಹಲಿ/ಇಂಫಾಲ್/ಗುವಾಹಟಿ: ಗಲಭೆ ಪೀಡಿತ ಮಣಿಪುರವು ಅರೆಕಾಲಿಕ ರಾಜ್ಯಪಾಲ, ವಿಫಲ ಮುಖ್ಯಮಂತ್ರಿ ಮತ್ತು ಅತಿ ವಿಫಲ ಕೇಂದ್ರ ಗೃಹ ಸಚಿವರಿಂದ ನಲುಗುತ್ತಿದ್ದು, ಅಲ್ಲಿನ ಜನರು ಇವರಿಗಿಂತ ಉತ್ತಮ ನಾಯಕರನ್ನು ಹೊಂದಲು ಅರ್ಹರಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್ ಹೇಳಿದ್ದಾರೆ.
ಮಾಜಿ ರಾಜ್ಯಪಾಲ ಅನುಸೂಯಾ ಉಯಿಕೆ ಅವರ ಅಧಿಕಾರಾವಧಿಯನ್ನು 18 ತಿಂಗಳಿಗಿಂತ ಮುನ್ನವೇ ಮೊಟಕುಗೊಳಿಸಲಾಗಿದೆ ಎಂದು ದೂರಿರುವ ಅವರು, ಹಲವು ಬಾರಿ ಮನವಿ ಮಾಡಿದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಏಕೆ ಭೇಟಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
2024ರ ಜುಲೈ 31ರಿಂದ ಮಣಿಪುರಕ್ಕೆ ಪೂರ್ಣಕಾಲಿಕ ರಾಜ್ಯಪಾಲರಿಲ್ಲ. ಈಗಿನ ಉಸ್ತುವಾರಿ ರಾಜ್ಯಪಾಲರು ಹೆಚ್ಚಿನ ಸಮಯವನ್ನು ಅಸ್ಸಾಂನಲ್ಲಿ ಕಳೆಯುತ್ತಾರೆ ಎಂದು ಅವರು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಎಎಫ್‌ಎಸ್‌ಪಿಎ ವಿಸ್ತರಣೆಗೆ ಮನವಿ: ಮಣಿಪುರದ ಆಡಳಿತಾರೂಢ ಬಿಜೆಪಿ ನೇತೃತ್ವದ ಮೈತ್ರಿಯ ಏಳು ಶಾಸಕರೂ ಸೇರಿದಂತೆ ಒಟ್ಟು 10 ಕುಕಿ ಶಾಸಕರು ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ’ಯನ್ನು (ಎಎಫ್‌ಎಸ್‌ಪಿಎ) ರಾಜ್ಯದಾದ್ಯಂತ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ. ಲೂಟಿಯಾಗಿರುವ ಶಾಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಈ ಕಾಯ್ದೆಯ ವಿಸ್ತರಣೆ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಹಿಂಸಾಚಾರ ಪೀಡಿತ ಜಿರೀಬಾಮ್ ಸೇರಿದಂತೆ ಮಣಿಪುರದ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರ ನವೆಂಬರ್ 14ರಂದು ಎಎಫ್‌ಎಸ್‌ಪಿಎ ಅನ್ನು ಪುನಃ ಜಾರಿಗೊಳಿಸಿತ್ತು. ಪ್ರಸ್ತುತ 13 ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಇಡೀ ರಾಜ್ಯ ಎಎಫ್‌ಎಸ್‌ಪಿಎ ಅಡಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.