ಗುವಾಹಟಿ: ಕುಕಿ ಸಮುದಾಯದವರು ಪ್ರಬಲರಾಗಿರುವ ತೆಂಗ್‌ನೌಪಾಲ್ ಜಿಲ್ಲೆಯಲ್ಲಿ ಈ ಸಮುದಾಯದ ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಮಣಿಪುರ ಪೊಲೀಸ್‌ನ ನಾಲ್ವರು ಕಮಾಂಡೊಗಳು ಸೇರಿದಂತೆ ಒಟ್ಟು ಏಳು ಮಂದಿ ಗಾಯಗೊಂಡಿದ್ದಾರೆ.
ಇಬ್ಬರು ನಾಗರಿಕರನ್ನು ಕರೆದೊಯ್ಯಲು ಭದ್ರತಾ ಸಿಬ್ಬಂದಿ ಯತ್ನಿಸಿದ್ದಾಗ, ಸ್ಥಳೀಯರು ಅದನ್ನು ತೀವ್ರವಾಗಿ ವಿರೋಧಿಸಿದ್ದು ಗುಂಡಿನ ಚಕಮಕಿಗೆ ಕಾರಣವಾಗಿದೆ. ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದೆ.
ಇದರಿಂದಾಗಿ ಪಟ್ಟಣದಲ್ಲಿ ಬಿಗುವಿನ ಪರಿಸ್ಥಿತಿ ತಲೆದೋರಿತ್ತು. ಮೇ ತಿಂಗಳಿನಿಂದಲೂ ಇಲ್ಲಿ ಘರ್ಷಣೆ ನಡೆಯುತ್ತಿದೆ.
ಗಾಯಗೊಂಡಿದ್ದ ನಾಲ್ವರು ಪೊಲೀಸ್ ಕಮಾಂಡೊಗಳು ಮತ್ತು ಬಿಎಸ್‌ಎಫ್ ಸಿಬ್ಬಂದಿಯನ್ನು ವಿಮಾನದಲ್ಲಿ ಇಂಫಾಲ್‌ಗೆ ಕರೆತರಲಾಗಿದ್ದು, ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯಿಂದಾಗಿ ಇದುವರೆಗೂ ಸುಮಾರು 200 ಜನರು ಮೃತ ಪಟ್ಟಿದ್ದಾರೆ. 60 ಸಾವಿರಕ್ಕೂ ಅಧಿಕ ಜನರು ಅತಂತ್ರರಾಗಿದ್ದಾರೆ.
ಸೋಮವಾರ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಮೈತೇಯಿ ಸಮುದಾಯಕ್ಕೆ ಸೇರಿದ್ದ ನಾಲ್ವರು ಮೃತಪಟ್ಟಿದ್ದು, ಇತರೆ ಐವರು ಗಾಯಗೊಂಡಿದ್ದರು.
ಸಿ.ಎಂ ಭೇಟಿ: ಆಸ್ಪತ್ರೆಗೆ ಭೇಟಿ ನೀಡಿದ್ದ ಸಿ.ಎಂ ಎನ್.ಬಿರೇನ್ ಸಿಂಗ್ ಅವರು, ಇಡೀ ರಾಜ್ಯದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ)’ ಜಾರಿ ಸೇರಿದಂತೆ ಕಠಿಣ ಕ್ರಮಜರುಗಿಸಲಾಗುವುದು ಎಂದು ಎಚ್ಚರಿಸಿದರು.
‘ಭದ್ರತಾ ಪಡೆಗಳ ಮೇಲೆ ದಾಳಿಗೆ ಆಧುನೀಕರಣ ಶಸ್ತ್ರಗಳನ್ನು ಬಳಸಲಾಗಿದೆ. ಇಂಥದ್ದನ್ನು ನೋಡಿಯೂ ಸರ್ಕಾರ ಮೌನವಾಗಿರಲಾಗದು. ಕಠಿಣ ಕ್ರಮ ಜಾರಿಗೊಂಡರೆ ಬಂಡಾಯಗಾರರೇ ಕಾರಣರಾಗುತ್ತಾರೆ’ ಎಂದು ಎಚ್ಚರಿಸಿದರು.
ಈ ಕಾಯ್ದೆ ಜಾರಿಯನ್ನು ಕಳೆದ ವರ್ಷ ಏಳು ಜಿಲ್ಲೆಗಳ 19 ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಹಿಂಪಡೆಯಲಾಗಿತ್ತು.
‘ಸೋಮವಾರದ ಗುಂಡಿನ ಚಕಮಕಿಗೆ ಡ್ರಗ್ಸ್ ಹಣದ ವಿವಾದ ಕಾರಣ’ :
ಮಾದಕವಸ್ತುಗಳ ಹಣ ಕುರಿತ ವಿವಾದ ಮಣಿಪುರದ ತೌಬಾಲ್ ಜಿಲ್ಲೆಯಲ್ಲಿ ಸೋಮವಾರ ನಡೆದಿದ್ದ ಗುಂಡಿನ ಚಕಮಕಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡೇಟಿನಿಂದ ನಾಲ್ವರು ನಾಗರಿಕರು ಸಾವಿಗೀಡಾಗಿದ್ದರು. ಚಕಮಕಿಯಲ್ಲಿ ಗಾಯಗೊಂಡಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದ್ದು ಇಂಫಾಲ್‌ನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲು ಮಾಡಲಾಗಿದೆ. ಘಟನೆ ವಿವರ ನೀಡಿರುವ ಅಧಿಕಾರಿಗಳು ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಂಘಟನೆಯ ಕೆಲ ಪದಾಧಿಕಾರಿಗಳು ಮಾದಕವಸ್ತು ಸಾಗಣೆ ಕುರಿತ ಹಲವು ಪ್ರಕರಣಗಳಿದ್ದ ವ್ಯಕ್ತಿಯೊಬ್ಬರ ಮನೆಯ ಬಳಿ ಬಂದಿದ್ದರು. ನಂತರದ ಕೆಲವೇ ಹೊತ್ತಿನಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರಿದ್ದು ಪಿಎಲ್‌ಎ ಪದಾಧಿಕಾರಿಗಳನ್ನು ಸುತ್ತುವರಿದಿದ್ದರು. ಒಂದು ಹಂತದಲ್ಲಿ ಪಿಎಲ್‌ಎ ಪದಾಧಿಕಾರಿಗಳು ಗುಂಪಿನತ್ತ ಗುಂಡು ಹಾರಿಸಿದ್ದು ನಾಲ್ವರು ಮೃತಪಟ್ಟರು. ಡ್ರಗ್ಸ್ ವಹಿವಾಟಿನ ಹಣಕ್ಕೆ ಸಂಬಂಧಿತ ವಿವಾದವೇ ಘಟನೆಗೆ ಕಾರಣ ಎಂದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.