ಗುವಾಹಟಿ: ಮಣಿಪುರದಲ್ಲಿಯೇ ವಾಸ್ತವ್ಯ ಹೂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮೈತೇಯಿ ಮತ್ತು ಕುಕಿ ಸಮುದಾಯದ ನಾಯಕರ ನಡುವಣ ಮಾತುಕತೆ ನಡೆಸಿ ಶಾಂತಿ ಪುನರ್ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಬುಧವಾರ ಮತ್ತೆ ನಾಲ್ಕು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದೆ.
ಬಿಷ್ಣುಪುರ್ ಮತ್ತು ಚುರಚಂದಪುರ ಜಿಲ್ಲೆಗಳಲ್ಲಿನ ಹಲವು ಗ್ರಾಮಗಳಲ್ಲಿ ಶಸ್ತ್ರಸಜ್ಜಿತ ಕಿಡಿಗೇಡಿಗಳು ಬೆಳಿಗ್ಗೆ ನಡೆಸಿದ ಗುಂಡಿನ ದಾಳಿಯಲ್ಲಿ ಹಲವು ನಾಗರಿಕರು ಗಾಯಗೊಂಡಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ತೌಬಾನ್ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಹಲವು ಮನೆಗಳು ಹಾಗೂ ಕುಕಿ ಸಮುದಾಯ ಹೆಚ್ಚಿರುವ ಕಾಂಗ್ಪೋಪಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಗಡಿಯಲ್ಲೂ ಪರಿಶೀಲನೆ: ಭಾರತ ಮತ್ತು ಮ್ಯಾನ್ಮಾರ್ ಗಡಿಗೆ ಹೊಂದಿರುವ ಮೊರೆಹ್ ಮತ್ತು ಕಾಂಗ್ಪೋಪಿ ಜಿಲ್ಲೆಗಳಿಗೆ ಅಮಿತ್ ಶಾ ಅವರು ಬೆಳಿಗ್ಗೆ ಭೇಟಿ ನೀಡಿ ಎರಡೂ ಬುಡಕಟ್ಟು ಸಮುದಾಯದ ನಾಯಕರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಶಾಂತಿ ನೆಲೆಗೊಳ್ಳಲು ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ಸೇನಾ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ನಡುವೆ ಸಭೆ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಬಗ್ಗೆ ಚರ್ಚಿಸಿದರು.
ಚುರಚಂದಪುರ ನಗರದಲ್ಲಿ ಮಂಗಳವಾರ ಬುಡಕಟ್ಟು ನಾಯಕರನ್ನು ಭೇಟಿ ಮಾಡಿದ್ದ ಶಾ ಅವರು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದರು.
ಹಿಂಸಾಚಾರದಲ್ಲಿ ಇಲ್ಲಿಯವರೆಗೆ 75 ಜನರು ಮೃತಪಟ್ಟಿದ್ದು, ಎರಡು ಸಾವಿರ ಮನೆಗಳು ಭಸ್ಮವಾಗಿವೆ. 35 ಸಾವಿರ ಜನರು ನೆಲೆ ಕಳೆದುಕೊಂಡಿದ್ದಾರೆ. ಸೇನೆ ಮತ್ತು ಅರೆಸೇನಾ ಪಡೆಯ 34 ಸಾವಿರಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಲಾಗಿದೆ. ಹಿಂಸಾಚಾರದ ವೇಳೆ ಪೊಲೀಸ್ ಠಾಣೆಗಳಲ್ಲಿದ್ದ 1,014 ಶಸ್ತ್ರಾಸ್ತ್ರಗಳನ್ನು ಕಿಡಿಗೇಡಿಗಳು ಹೊತ್ತೊಯ್ದಿದ್ದಾರೆ. ಈ ಪೈಕಿ 500 ಶಸ್ತ್ರಾಸ್ತ್ರಗಳನ್ನಷ್ಟೇ ವಶಪಡಿಸಿಕೊಳ್ಳಲಾಗಿದೆ. ಉಳಿದವು ಕಿಡಿಗೇಡಿಗಳ ಬಳಿ ಇರುವುದರಿಂದ ಭದ್ರತಾ ಪಡೆಯ ಯೋಧರು ಮತ್ತು ನಿರಾಶ್ರಿತ ಶಿಬಿರಗಳಲ್ಲಿ ಇರುವ ಜನರ ನಿದ್ದೆಗೆಡುವಂತಾಗಿದೆ.
‘ಹೊತ್ತೊಯ್ದಿರುವ ಶಸ್ತ್ರಾಸ್ತ್ರಗಳನ್ನು ಕೂಡಲೇ ವಾಪಸ್ ನೀಡಬೇಕು. ಸೇನಾ ಪಡೆಗಳು ಈಗಾಗಲೇ ಪತ್ತೆ ಕಾರ್ಯಾಚರಣೆ ಆರಂಭಿಸಿವೆ. ಈ ವೇಳೆ ಶಸ್ತ್ರಾಸ್ತ್ರ ಸಿಕ್ಕಿದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಎನ್. ಬಿರೆನ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.