ADVERTISEMENT

ಮಣಿಪುರ: ಸರಕು ಸಾಗಣೆ ವಾಹನಗಳ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 21 ಮೇ 2023, 14:38 IST
Last Updated 21 ಮೇ 2023, 14:38 IST
ಮಣಿಪುರದ ಇಂಫಾಲ್‌ನಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುತ್ತಿರುವ ಸರಕು ಸಾಗಣೆ ವಾಹನಗಳು –ಪಿಟಿಐ ಚಿತ್ರ
ಮಣಿಪುರದ ಇಂಫಾಲ್‌ನಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುತ್ತಿರುವ ಸರಕು ಸಾಗಣೆ ವಾಹನಗಳು –ಪಿಟಿಐ ಚಿತ್ರ   

ಇಂಫಾಲ್ (ಪಿಟಿಐ): ಹಿಂಸಾಚಾರ ಪೀಡಿತ ಮಣಿಪುರದ ನಾಗರಿಕರಿಗೆ ಆಹಾರದ ಅಭಾವ ತಲೆದೋರದಂತೆ ವಿಶೇಷ ಭದ್ರತೆಯೊಂದಿಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. 

ರಾಷ್ಟ್ರೀಯ ಹೆದ್ದಾರಿ 37ರ ಮೂಲಕ ಆಹಾರ ಪದಾರ್ಥಗಳನ್ನು ಹೊತ್ತ ವಾಹನಗಳು ಇಂಫಾಲ್‌ಗೆ ಪ್ರವೇಶಿಸುತ್ತಿವೆ. ಮೇ 15ರಿಂದಲೇ ಭಾರತೀಯ ಸೇನೆ, ಅಸ್ಸಾಂ ರೈಫಲ್‌ ಪಡೆ, ಕೇಂದ್ರ ಭದ್ರತಾ ಪಡೆಗಳು ಹಾಗೂ ಪೊಲೀಸರ ಭದ್ರತೆಯೊಂದಿಗೆ ಈ ವಾಹನಗಳ ಸಂಚಾರ ಆರಂಭಗೊಂಡಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. 

ಹೆದ್ದಾರಿ ಮೂಲಕ ಸಾಗುವ ಈ ವಾಹನಗಳ ಮೇಲೆ ವೈಮಾನಿಕ ಕಣ್ಗಾವಲು ಇಡಲಾಗಿದೆ. ಇವುಗಳ ಜೊತೆಗೆ ಕ್ಷಿಪ್ರ ಕಾರ್ಯಪಡೆ ತಂಡಗಳು ಸಂಚರಿಸುತ್ತಿವೆ ಎಂದು ತಿಳಿಸಿದ್ದಾರೆ.

ADVERTISEMENT

ಮಣಿಪುರದಲ್ಲಿ ಸಂಭವಿಸಿದ ಹಿಂಸಾಚಾರದ ಪರಿಣಾಮ ಕಣಿವೆ ಪ್ರದೇಶದಲ್ಲಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಭಯದ ವಾತಾವರಣ ಸೃಷ್ಟಿಯಾಗಿದ್ದರಿಂದ ಸರಕು ಸಾಗಣೆದಾರರು ಹಿಂದಡಿ ಇಟ್ಟಿದ್ದರು. ಇದರಿಂದ ಅಗತ್ಯ ವಸ್ತುಗಳ ಪೂರೈಕೆ ಕಡಿಮೆಯಾಗುತ್ತಿದ್ದು, ಆಹಾರದ ಸಮಸ್ಯೆ ಉಲ್ಬಣಿಸಲು ಸಾಧ್ಯತೆ ಹೆಚ್ಚಿತ್ತು. ಹಾಗಾಗಿ, ಅಗತ್ಯ ವಸ್ತುಗಳ ಸಾಗಣೆಗೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಿಂಸಾಚಾರದಲ್ಲಿ 70 ಮಂದಿ ಮೃತಪಟ್ಟಿದ್ದಾರೆ. ಜನಜೀವನ ಸಹಜ ಸ್ಥಿತಿಗೆ ಮರಳಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದ್ದು, ಸೇನೆ ಮತ್ತು ಅರೆಸೇನಾ ಪಡೆಯ 10 ಸಾವಿರ ಯೋಧರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.