ADVERTISEMENT

ಮಣಿಪುರ | ಯುವಕರ ಅಪಹರಣ: ಇಂಫಾಲ್‌ ಕಣಿವೆಯಲ್ಲಿ ಬಂದ್

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದ ಮಹಿಳೆಯರು; ರಸ್ತೆಯಲ್ಲೇ ಪ್ರತಿಭಟನೆ

ಪಿಟಿಐ
Published 2 ಅಕ್ಟೋಬರ್ 2024, 12:19 IST
Last Updated 2 ಅಕ್ಟೋಬರ್ 2024, 12:19 IST
   

ಇಂಫಾಲ್: ಇಬ್ಬರು ಯುವಕರ ಅಪಹರಣಕ್ಕೆ ಸಂಬಂಧಿಸಿದಂತೆ ಮೈತೇಯಿ ಜಂಟಿ ಕ್ರಿಯಾ ಸಮಿತಿಯು (ಜೆಎಸಿ) ಬುಧವಾರ ಕರೆ ನೀಡಿದ್ದ ಬಂದ್, ಇಂಫಾಲ್ ಕಣಿವೆಯ ಐದು ಜಿಲ್ಲೆಗಳಲ್ಲಿ ಯಶಸ್ವಿಯಾಯಿತು.

ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಬಿಷ್ಣುಪುರ, ಕಾಕ್‌ಚಿಂಗ್ ಮತ್ತು ಥೌಬಲ್ ಜಿಲ್ಲೆಗಳಲ್ಲಿ ಪ್ರತಿಭಟನಕಾರರು ಬೀದಿಗಿಳಿದಿದ್ದರಿಂದ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಮುಚ್ಚಿದ್ದವು. ವಾಹನಗಳು ರಸ್ತೆಗಿಳಿಯಲಿಲ್ಲ. ಜನಜೀವನ ಅಸ್ತವ್ಯಸ್ತವಾಯಿತು.

ಥೌಬಲ್‌ನಲ್ಲಿ ಮಂಗಳವಾರ ಮುಂಜಾನೆಯೇ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಮೇಳ ಮೈದಾನ, ವಾಂಗ್ಜಿಂಗ್, ಯೈರಿಪೋಕ್ ಮತ್ತು ಖಂಗಾಬೋಕ್‌ನಲ್ಲಿ ಮಹಿಳೆಯರು ರಾಷ್ಟ್ರೀಯ ಹೆದ್ದಾರಿ 102ರಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೇಳ ಮೈದಾನದ ಬಳಿ ಮಹಿಳೆಯರು ರಸ್ತೆ ಮಧ್ಯದಲ್ಲಿ ಪ್ರತಿಭಟಿಸಿದರೆ, ವಾಹನಗಳ ಸಂಚಾರ ತಡೆಯಲು ಯುವಕರು ಟೈರ್ ಸುಟ್ಟು ಹಾಕಿದ್ದರು. 

ಇಂಫಾಲ್ ಪೂರ್ವ ಜಿಲ್ಲೆಯ ಖುರಾಯ್, ಲ್ಯಾಮ್ಲಾಂಗ್‌ನಲ್ಲಿ ಅಂಗಡಿಗಳನ್ನು ಬಲವಂತದಿಂದ ಮುಚ್ಚಿಸಲಾಯಿತು.

‌ಅಪಹರಣಕ್ಕೊಳಗಾದ ಯುವಕರಿಬ್ಬರ ಬಿಡುಗಡೆ ಆಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಜೆಎಸಿ ಸಂಚಾಲಕ ಎಲ್. ಸುಬೋಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.