ADVERTISEMENT

ಮಣಿಪುರ: ಅಪಹರಣ ವಿರೋಧಿಸಿ ಮಾನವ ಸರಪಳಿ

ಪಿಟಿಐ
Published 14 ನವೆಂಬರ್ 2024, 15:38 IST
Last Updated 14 ನವೆಂಬರ್ 2024, 15:38 IST
<div class="paragraphs"><p>ಮಾನವ ಸರಪಳಿ</p></div>

ಮಾನವ ಸರಪಳಿ

   

ಇಂಫಾಲ್‌: ಶಸ್ತ್ರಸಜ್ಜಿತ ಬುಡಕಟ್ಟು ಉಗ್ರರು ಜಿರಿಬಾಮ್‌ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಇಂಫಾಲ್‌ ಕಣಿವೆಯಾದ್ಯಂತ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಸಂಸ್ಥೆಗಳ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು.

ಆರು ಮಂದಿಯನ್ನು ಕೂಡಲೇ ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು. ಕಪ್ಪು ಬಾವುಟ ಹಿಡಿದು, ಕಪ್ಪು ಬ್ಯಾಡ್ಜ್‌ ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಮೈತೇಯಿ ಸಮುದಾಯದ ವಿದ್ಯಾರ್ಥಿ ಬಣ ಮಾನವ ಸರಪಳಿಯನ್ನು ಆಯೋಜಿಸಿತ್ತು. ‘ಇಂದು ದೇಶದಲ್ಲಿ ಮಕ್ಕಳ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮುಗ್ಧ ಮಕ್ಕಳನ್ನು ಬಿಡುಗಡೆ ಮಾಡಿ ಹಾಗೂ ನಮ್ಮ ಸ್ನೇಹಿತರನ್ನೂ ಬಿಡುಗಡೆ ಮಾಡಿ’ ಎಂದು ಫಲಕಗಳನ್ನು ಪ್ರದರ್ಶಿಸಲಾಯಿತು.

‘ಮಣಿಪುರಕ್ಕೆ ಇಂದು ಅತ್ಯಂತ ದುಃಖಕರ ಮಕ್ಕಳ ದಿನವಾಗಿದೆ’ ಎಂದು ಇಲ್ಲಿನ 11ನೇ ತರಗತಿ ವಿದ್ಯಾರ್ಥಿ ತೌನೊಜಮ್‌ ಥಡೋಯ್‌ ಬೇಸರ ವ್ಯಕ್ತಪಡಿಸಿದರು.

ಅಪಹರಣ ಆದವರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.