ADVERTISEMENT

‘ಕೇರಳ ಸ್ಟೋರಿ‘ ಬೆನ್ನಲ್ಲೇ ಚರ್ಚ್‌ನಲ್ಲಿ ಮಣಿಪುರ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ

ಪಿಟಿಐ
Published 10 ಏಪ್ರಿಲ್ 2024, 13:02 IST
Last Updated 10 ಏಪ್ರಿಲ್ 2024, 13:02 IST
<div class="paragraphs"><p>‘ಕ್ರೈ ಆಫ್ ದಿ ಆಪ್ರೆಸ್ಡ್‌ ಹಾಗೂ ದಿ ಕೇರಳ ಸ್ಟೋರಿ</p></div>

‘ಕ್ರೈ ಆಫ್ ದಿ ಆಪ್ರೆಸ್ಡ್‌ ಹಾಗೂ ದಿ ಕೇರಳ ಸ್ಟೋರಿ

   

ಕೊಚ್ಚಿ: ಇಡುಕ್ಕಿಯ ಸೈರೊ ಮಲಬಾರ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ವಿವಾದಾತ್ಮಕ ‘ದಿ ಕೇರಳ ಸ್ಟೋರಿ’ ಚಿತ್ರ ಪ್ರದರ್ಶಿಸಿದ ಬೆನ್ನಲ್ಲೇ, ಮಣಿಪುರದಲ್ಲಿ ನಡೆದ ಜನಾಂಗೀಯ ಗಲಭೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರವನ್ನು ಎರ್ನಾಕುಲಂನ ಅಂಗಾಮಲೇ ಆರ್ಚ್ ಡಯಾಸಿಸ್‌ ತನ್ನ ಚರ್ಚ್ ಆವರಣದಲ್ಲಿ ಬುಧವಾರ ಪ್ರದರ್ಶಿಸಿದೆ.

ಮಣಿಪುರದ ಹಿಂಸಾಚಾರ ಕುರಿತು ಸಾಕ್ಷ್ಯಚಿತ್ರ ‘ಕ್ರೈ ಆಫ್ ದಿ ಆಪ್ರೆಸ್ಡ್‌’ ಅನ್ನು ಸಂಜೋಪುರಂ ಸೇಂಟ್ ಜೋಸೆಫ್‌ ಚರ್ಚ್‌ನಲ್ಲಿ ನಡೆದ ಕ್ಯಾಡೆಕಿಸಂನ ರಜಾಕಾಲದ ತರಗತಿಯಲ್ಲಿ ಪ್ರದರ್ಶಿಸಲಾಗಿದೆ. ಸುಮಾರು 125 ವಿದ್ಯಾರ್ಥಿಗಳು ಚಿತ್ರ ವೀಕ್ಷಿಸಿದರು. 

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಫಾದರ್ ಜೇಮ್ಸ್ ಪನವೆಲಿಲ್, ‘‘ದಿ ಕೇರಳ ಸ್ಟೋರಿ’ ಒಂದು ಯೋಜನಾಬದ್ಧ ಮತ್ತು ಪ್ರಚಾರಕ್ಕಾಗಿ ತೆಗೆದ ಚಿತ್ರ. ಅಂಥವುಗಳನ್ನು ಚರ್ಚ್ ಪ್ರದರ್ಶಿಸಲೇಬಾರದು. ಅದರಲ್ಲೂ ವಿದ್ಯಾರ್ಥಿಗಳಿಗಂತೂ ಅಂಥ ಚಿತ್ರ ತೋರಿಸಲೇಬಾರದು. ಒಂದೊಮ್ಮೆ ಅಂಥ ಚಿತ್ರ ಪ್ರದರ್ಶಿಸಿದರೆ, ನಾವೂ ಆ ಪ್ರಚಾರದ ಭಾಗವಾಗುತ್ತೇವೆ. ನಾವು ಅದರಿಂದ ದೂರವಿರುವುದನ್ನು ದೃಢೀಕರಿಸಲೆಂದೇ ಮಣಿಪುರದ ಹಿಂಸಾಚಾರ ಕುರಿತ 15 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದ್ದೇವೆ’ ಎಂದಿದ್ದಾರೆ.

‘ಮಣಿಪುರದಲ್ಲಿ ನಡೆದಿದ್ದು ಉತ್ಪ್ರೇಕ್ಷೆಯೂ ಅಲ್ಲ, ಸುಳ್ಳೂ ಅಲ್ಲ ಅಥವಾ ನಡೆಯದ ಘಟನೆಯಂತೂ ಅಲ್ಲವೇ ಅಲ್ಲ. ಹೀಗಾಗಿ ಇಂಥ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದರಲ್ಲಿ ತಪ್ಪೇನು. ‘ಕೇರಳ ಸ್ಟೋರಿ’ ಚಲನಚಿತ್ರವೂ ‘ಕಾಶ್ಮೀರ್ ಫೈಲ್ಸ್‌’ನಂತೆಯೇ ಸಂಘ ಪರಿವಾರದ ಪೂರ್ವ ನಿಯೋಜಿತ ಸಿನಿಮಾ. ಸಾಮಾನ್ಯ ಜನರಿಗೂ ಇದು ಗೊತ್ತಿದೆ. ಕೇರಳ ಫೈಲ್ಸ್‌ ಚಿತ್ರವನ್ನು ಇಡುಕ್ಕಿ ಡಯಾಸಿಸ್‌ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಭಾವಿಸಿ ಪ್ರದರ್ಶಿಸಿರಬಹುದು. ಆದರೆ, ಅದರ ವಾಸ್ತವವನ್ನು ಅರಿತು ಪ್ರದರ್ಶನಕ್ಕೆ ಬೇರೆ ಚಿತ್ರ ಆಯ್ಕೆ ಮಾಡಿಕೊಳ್ಳಬಹುದಿತ್ತು’ ಎಂದಿದ್ದಾರೆ.

ಉಕ್ರೇನ್‌ನಲ್ಲಿರುವ ಚರ್ಚ್‌ ಅತಿ ದೊಡ್ಡದು. ಪೂರ್ವದಲ್ಲಿರುವ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸೈರೊ ಮಲಬಾರ್ ಚರ್ಚ್‌ 2ನೇ ಅತ್ಯಂತ ದೊಡ್ಡದು. ಯುವಜನರ ಮೇಲಾಗುತ್ತಿರುವ ನಕಾರಾತ್ಮಕ ಪರಿಣಾಮದಿಂದ ಜಾಗೃತಗೊಳಿಸುವ ಉದ್ದೇಶದಿಂದ ಕೇರಳ ಕ್ಯಾಥೊಲಿಕ್ ಬಿಷಪ್ ಚರ್ಚ್‌ ಇಂಥ ವಿನೂತನ ಕ್ರಮ ಕೈಗೊಂಡಿದೆ. ಆಮೂಲಕ ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿ ನೆಲೆಸುವಂತೆ ಮಾಡಲು ಯೋಜನೆ ಹೊಂದಿದೆ ಎಂದು ಅದರ ಮುಖ್ಯಸ್ಥರು ತಿಳಿಸಿದ್ದಾರೆ.

ಕೇರಳ ಸ್ಟೋರಿ ಸಿನಿಮಾವನ್ನು ದೂರದರ್ಶನವು ಕಳೆದ ವಾರ ಪ್ರಸಾರ ಮಾಡಿತು. ಇದಾದ ನಂತರ ಕೇರಳದಲ್ಲಿ ಹಲವರಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ನ ಯೋಜನೆಯ ಭಾಗವಾಗಿ ಈ ಸಿನಿಮಾ ತೆರೆಕಂಡಿದೆ ಎಂದು ಸಿಪಿಐಎಂ ಆರೋಪಿಸಿದೆ. ಜತೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಇದನ್ನು ವಿರೋಧಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡರಾದ ವಿ.ಡಿ.ಸತೀಶನ್ ಹಾಗೂ ಎ.ಕೆ.ಆ್ಯಂಟನಿ ಕೂಡಾ ಧನಿಗೂಡಿಸಿದ್ದಾರೆ.

‘ಚಿತ್ರಕ್ಕೆ ಸೆನ್ಸರ್ ಮಂಡಳಿ ಪ್ರಮಾಣಪತ್ರ ನೀಡಿದ್ದು, ಯಾರು ಬೇಕಾದರೂ ಈ ಚಿತ್ರವನ್ನು ವೀಕ್ಷಿಸಬಹುದು’ ಎಂದು ಬಿಜೆಪಿ ಮುಖಂಡ ಪ್ರಕಾಶ ಜಾವಡೇಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.