ಇಂಫಾಲ: ಜುಲೈನಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಕೊಲೆಯಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಂಯಮ ಕಾಪಾಡುವಂತೆ ಮಣಿಪುರ ಸರ್ಕಾರ ಜನರಿಗೆ ಮನವಿ ಮಾಡಿದೆ.
ಕಾಣೆಯಾದ ಇಬ್ಬರು ವಿದ್ಯಾರ್ಥಿಗಳ ಚಿತ್ರ ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಕಾಣೆಯಾದ ವಿದ್ಯಾರ್ಥಿಗಳು ಶಸ್ತ್ರ ಸಜ್ಜಿತ ಇಬ್ಬರು ಪುರುಷರೊಂದಿಗೆ ಇರುವ ಹಾಗೂ ಮೃತದೇಹ ಇರುವ ಇನ್ನೊಂದು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಈ ಅಪರಹರಣ ಹಾಗೂ ಕೊಲೆ ಪ್ರಕರಣದ ತನಿಖೆಗೆ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಮಣಿಪುರ ಸರ್ಕಾರ ಜನರೊಂದಿಗೆ ಮನವಿ ಮಾಡಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಸಚಿವಾಲಯವು ಸೋಮವಾರ ರಾತ್ರಿ ಪ್ರಕಟಣೆ ಹೊರಡಿಸಿದ್ದು, ಈ ಪ್ರಕರಣವನ್ನು ಈಗಾಗಲೇ ಸಿಬಿಐಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಅಪಹರಣದ ಹಿಂದಿನ ಕಾರಣಗಳು ಹಾಗೂ ಕೊಲೆ ಆರೋಪಿಗಳ ಬಂಧನಕ್ಕೆ ‘ರಾಜ್ಯ ಪೊಲೀಸರು, ಕೇಂದ್ರ ತನಿಖಾ ಸಂಸ್ಥೆ ಜತೆ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನೂ ಆರಂಭಿಸಿವೆ ಎಂದು ಬೀರೇನ್ ಸಿಂಗ್ ಅವರ ಕಚೇರಿ ಹೇಳಿದೆ.
ಭದ್ರತಾ ಪಡೆಗಳು ಚುರುಕಾಗಿದ್ದು, ಸಂಭವ್ಯ ಅನಾಹುತ ತಡೆಯಲು ಎಲ್ಲಾ ತಯಾರಿಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ವಿದ್ಯಾರ್ಥಿಗಳನ್ನು ಫಿಜಂ ಹೆಮ್‌ಜಿತ್ (21) ಹಾಗೂ ಹಿಜಮ್ ಲಿಂತೋಯಿನ್‌ಗಂಬಿ (17) ಎಂದು ಗುರುತಿಸಲಾಗಿದೆ. ಜುಲೈ 6ರಂದು ಈ ಇಬ್ಬರು ನಾಪತ್ತೆಯಾಗಿದ್ದರು.
ಇಬ್ಬರು ವಿದ್ಯಾರ್ಥಿಗಳ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.
ವಿದ್ಯಾರ್ಥಿಗಳಿಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅವರು ಎಲ್ಲಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಪೊಲೀಸರು ಈ ಹಿಂದೆ ಹೇಳಿದ್ದರು.
ಕೊನೆಯದಾಗಿ ಚುರ್‌ಚಂದಪುರ ಜಿಲ್ಲೆಯ ಲಾಮ್‌ಡನ್ ಪ್ರದೇಶದಲ್ಲಿ ಅವರು ಇದ್ದಿದ್ದಾಗಿ ಮೊಬೈಲ್ ಲೊಕೇಶನ್ ತೋರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.