ಗುವಾಹಟಿ: ದರೋಡೆ ಸೇರಿದಂತೆ ಮನೆಗಳು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ 23 ಮಂದಿಯನ್ನು ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಬಳಿ ಇದ್ದ ಪಿಸ್ತೂಲ್, ಮದ್ದು ಗುಂಡುಗಳು ಸೇರಿದಂತೆ ಎಂಟು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘರ್ಷಣೆ ಪೀಡಿತ ಮಣಿಪುರದಲ್ಲಿ ಕರ್ಫ್ಯೂ ಮತ್ತು ಅಂತರ್ಜಾಲ ಸೇವೆ ಸ್ಥಗಿತ ಹೊರತಾಗಿಯೂ ರಾಜ್ಯದಾದ್ಯಂತ ಮೈತೇಯಿ ಪ್ರತಿಭಟನಾಕಾರರು ಮನೆಗಳು, ವಾಹನಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ.
ಉದ್ರಿಕ್ತರ ಗುಂಪು ಇಂಫಾಲದಲ್ಲಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಖಾಸಗಿ ಮನೆ ಮೇಲೆ ದಾಳಿ ನಡೆಸಿದೆ. ಸಚಿವರು, ಶಾಸಕರ ಮನೆಗಳನ್ನು ಗುರಿಯಾಗಿಸಿ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ. ಇಂಫಾಲ್‌ನಲ್ಲಿ ಭದ್ರತೆಯನ್ನು ಬಲಪಡಿಸಲು ಸೇನೆ, ಅಸ್ಸಾಂ ರೈಫಲ್ಸ್ ಸೇರಿದಂತೆ ವಿವಿಧ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರವು ಕುಕಿ ದಂಗೆಕೋರರಿಂದ ಅಪಹರಣಕ್ಕೊಳಗಾಗಿದ್ದ ಮೈತೇಯಿ ಸಮುದಾಯದ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ನ.11ರಂದು ಜಿರೀಬಾಮ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಮೈತೇಯಿ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಮೂವರು ಮಹಿಳೆಯರು, ಎಂಟು ತಿಂಗಳ ಒಂದು ಹಾಗೂ ಎರಡೂವರೆ ತಿಂಗಳ ಎರಡು ಶಿಶುಗಳ ಮೃತದೇಹಗಳು ಪತ್ತೆಯಾಗಿರುವ ಬೆನ್ನಲ್ಲೇ ಮಣಿಪುರದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.