ಇಂಫಾಲ್: ಅಪರಿಚಿತ ‘ಕುಕಿ ದುಷ್ಕರ್ಮಿಗಳು’ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಣಿಪುರದ ಚುರಚಾಂದ್‌ಪುರ ಜಿಲ್ಲೆಯ 37 ವರ್ಷದ ವಿವಾಹಿತ ಮಹಿಳೆಯೊಬ್ಬರು ಗುರುವಾರ ಝೀರೊ ಎಫ್‌ಐಆರ್ ದಾಖಲಿಸಿದ್ದಾರೆ. ಕೃತ್ಯವು ಮೇ 3ರಂದು ನಡೆದಿದೆ ಎಂದು ದೂರಿನಲ್ಲಿ ಅವರು ಹೇಳಿದ್ದಾರೆ.
ಕುಕಿ ಸಮುದಾಯವು ಪ್ರಬಲವಾಗಿರುವ ಚುರಚಾಂದ್‌ಪುರ ಜಿಲ್ಲೆಯಲ್ಲಿ ಕೋಮು ಹಿಂಸಾಚಾರ ಆರಂಭವಾದ ಬಳಿಕ ತಾವು ಮನೆಯಿಂದ ಪರಾರಿಯಾಗುವಾಗ ತಮ್ಮ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದಿದ್ದಾರೆ. ಮಹಿಳೆಯು ಈಗ ಮೈತೇಯಿ ಸಮುದಾಯವು ಪ್ರಬಲವಾಗಿರುವ ಬಿಷ್ಣುಪುರ ಜಿಲ್ಲೆಯ ಸಂತ್ರಸ್ತರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ.
ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಬಳಿಕ ಅದನ್ನು ಕೃತ್ಯ ನಡೆದ ಚುರಚಾಂದ್‌ಪುರ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಿ ದ್ದಾರೆ. ‘ಝೀರೊ ಎಫ್‌ಐಆರ್’ ಅನ್ನು ಯಾವುದೇ ಠಾಣೆಯಲ್ಲಿ ಬೇಕಿದ್ದರೂ ದಾಖಲಿಸಬಹುದು. ನಂತರ ಅದನ್ನು ಕೃತ್ಯ ನಡೆದ ಸ್ಥಳದ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.
ಸಾಮೂಹಿಕ ಅತ್ಯಾಚಾರ, ಮಹಿಳೆಯ ಘನತೆಯನ್ನು ಕುಗ್ಗಿಸುವ ಉದ್ದೇಶದಿಂದ ಹಲ್ಲೆ ಮತ್ತು ಅಪರಾಧ ಒಳಸಂಚು ನಡೆಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಮೇ 3ರಂದು ಸಂಜೆ 6.30ರ ಹೊತ್ತಿಗೆ ಅತ್ಯಾಚಾರ ನಡೆದಿದೆ. ಕುಕಿ ಜನರು ತಮ್ಮದೂ ಸೇರಿಸಿ ಹಲವು ಮನೆಗಳ ಮೇಲೆ ಬೆಂಕಿ ಹಚ್ಚಿದ್ದಾರೆ. ಈ ಸಂಘರ್ಷದ ನಡುವೆ ತಪ್ಪಿಸಿಕೊಂಡು ಓಡಿದರೂ ಅರ್ಧ ಕಿಲೋಮೀಟರ್ ದೂರ ಸಾಗುವಷ್ಟರಲ್ಲಿ ಕೆಲವು ಜನರು ತಮ್ಮನ್ನು ತಡೆಗಟ್ಟಿ ಹಲ್ಲೆ ನಡೆಸಿದರು ಎಂದು ಮಹಿಳೆ ಹೇಳಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಚುರಚಾಂದ್‌ಪುರ ಮತ್ತು ಕಾಂಗ್‌ಪೊಕ್ಪಿಯಂತಹ ಕುಕಿ ಸಮುದಾಯದ ಜನರು ಹೆಚ್ಚಾಗಿರುವ ಜಿಲ್ಲೆಗಳಿಂದ ಮೈತೇಯಿ ಸಮುದಾಯದ ಸಾವಿರಾರು ಜನರು ಪರಾರಿಯಾಗಿ, ಸಂತ್ರಸ್ತರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಂಫಾಲ್, ಬಿಷ್ಣುಪುರ ಮತ್ತು ಥೌಬಲ್ ಜಿಲ್ಲೆಗಳಲ್ಲಿ ಮೈತೇಯಿ ಸಮುದಾಯದ ಪ್ರಾಬಲ್ಯ ಇದ್ದು, ಇಲ್ಲಿದ್ದ ಕುಕಿ ಸಮುದಾಯದ ಜನರು ಪರಾರಿಯಾಗಿದ್ದಾರೆ.
ಪರಿಸ್ಥಿತಿಯನ್ನು ನಿಯಂತ್ರಣಲ್ಲಿ ಇರಿಸಿಕೊಳ್ಳುವ ಉದ್ದೇಶದಿಂದ ಗುಡ್ಡಗಾಡು ಪ್ರದೇಶ ಮತ್ತು ಕಣಿವೆ ಪ್ರದೇಶದ ನಡುವೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮೈತೇಯಿ ಮತ್ತು ಕುಕಿ ಸಮುದಾಯದ ಜನರ ನಡುವೆ ಉಂಟಾದ ಸಂಘರ್ಷದಿಂದಾಗಿ ಸುಮಾರು 160 ಜನರ ಹತ್ಯೆ ಆಗಿದೆ. 60 ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. 40 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹಾಗಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ.
ಮೈತೇಯಿ ಸಮುದಾಯದ ಜನರು ಕುಕಿ ಸಮುದಾಯದ ಮಹಿಳೆಯೊಬ್ಬರನ್ನು ಬೆತ್ತಲುಗೊಳಿಸಿ ಮೆರವಣಿಗೆ ನಡೆಸಿದ ವಿಡಿಯೊ ಜುಲೈ 20ರಂಂದು ಬಹಿರಂಗವಾಗಿತ್ತು. ಅದರ ಬಳಿಕ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಇವನ್ನೂ ಓದಿ
* ಬಿಜೆಪಿಗರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು: ರಾಹುಲ್ ಗಾಂಧಿ ಗುಡುಗು
* ಕೈಮುಗಿದು ಪ್ರಾರ್ಥಿಸುವೆ ಹಿಂಸೆ ನಿಲ್ಲಿಸಿ: ಕುಕಿ–ಮೈತೇಯಿ ಸಮುದಾಯಗಳಿಗೆ ಶಾ ಮನವಿ
* ಹಿಂಸಾಚಾರ: ಮಣಿಪುರ ವಿಧಾನಸಭೆ ವಿಶೇಷ ಅಧಿವೇಶನಕ್ಕೆ ಆಗ್ರಹಿಸಿ ಪಂಜಿನ ಮೆರವಣಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.