ಗುವಾಹಟಿ: ಸಂಘರ್ಷ ಪೀಡಿತ ಮಣಿಪುರದಲ್ಲಿ ಸುಮಾರು 500 ಮಂದಿ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ನರನ್‌ಸೈನಾ ಪ್ರದೇಶದಲ್ಲಿರುವ, ಭಾರತೀಯ ಸೇನೆಯ ಎರಡನೇ ಭಾರತೀಯ ಮೀಸಲು ಬೆಟಾಲಿಯನ್ (IRB) ಶಸ್ತ್ರಾಗಾರಕ್ಕೆ ನುಗ್ಗಿ INSAS, MP5, ಹ್ಯಾಂಡ್ ಗ್ರೆನೇಡ್ ಸಹಿತ 300 ಶಸ್ತ್ರಾಸ್ತ್ರಗಳನ್ನು ಕೊಳ್ಳೆಹೊಡೆದಿದ್ದಾರೆ.
ಈ ಬಗ್ಗೆ ಮಣಿಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಗುರುವಾರ ಬೆಳಿಗ್ಗೆ ಸುಮಾರು 9.45ರ ವೇಳೆಗೆ ಈ ಘಟನೆ ನಡೆದಿದೆ. ಜನಾಂಗೀಯ ಹಿಂಸಾಚಾರದಲ್ಲಿ ಮೃತಪಟ್ಟ 35 ಮಂದಿಯ ದೇಹವನ್ನು ವಿವಾದಿತ ಸ್ಥಳದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡುವ ಕುಕಿ ಸಮುದಾಯದ ಸಂಘಟನೆ ಐಟಿಎಲ್‌ಎಫ್‌ನ ಕ್ರಮ ವಿರೋಧಿಸಿ ಮೈತೇಯಿ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಮೊಯಿರಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಸುಮಾರು 500ರಷ್ಟಿದ್ದ ದುಷ್ಕರ್ಮಿಗಳು 40–45 ವಾಹನಗಳಲ್ಲಿ ಬಂದು ಶಸ್ತ್ರಾಗಾರಕ್ಕೆ ನುಗ್ಗಿದ್ದಾರೆ. ಎರಡು ಬಾಗಿಲುಗಳನ್ನು ಮುರಿದು ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಯುದ್ಧಸಾಮಗ್ರಿಗಳು ಮತ್ತು ಇತರ ಪರಿಕರಗಳನ್ನು ಲೂಟಿ ಮಾಡಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.
ದೂರಿನ ಪ್ರತಿಯನ್ನು ಐಟಿಎಲ್‌ಎಫ್ ಶುಕ್ರವಾರ ಬಹಿರಂಗ ಪಡಿಸಿದೆ. ಅದರೆ ಮಣಿಪುರ ಪೊಲೀಸರು ಅದನ್ನು ಖಚಿತಪಡಿಸಿಲ್ಲ.
290 ರೈಫಲ್‌ಗಳು, 17 ಪಿಸ್ತೂಲ್‌ಗಳು, ಗ್ರೆನೇಡ್‌ಗಳು, ಅಶ್ರುವಾಯು ಶೆಲ್‌ಗಳು ಮತ್ತು ಇತರ ಕೆಲವು ಉಪಕರಣಗಳನ್ನು ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕಳವಾಗಿರುವುದರಲ್ಲಿ ಒಂದು ಎಕೆ ಸರಣಿಯ ರೈಫಲ್, ಮೂರು ಘಾಟಕ್ ರೈಫಲ್‌ಗಳು, 25 ಐಎನ್‌ಎಸ್‌ಎಎಸ್ ರೈಫಲ್‌ಗಳು, ಐದು ಎಂಪಿ5 ರೈಫಲ್‌ಗಳು, 195 7.62 ಎಂಎಂ ಎಸ್‌ಎಲ್‌ಆರ್, 16 9 ಎಂಎಂ ಪಿಸ್ತೂಲ್‌ಗಳು, 21 ಎಸ್‌ಎಂಸಿ ಕಾರ್ಬೈನ್‌ಗಳು, ಮೂರು ಮಾರ್ಟರ್‌ಗಳು, 74 ಡಿಟೋನೇಟರ್‌ಗಳು, 124 ಹ್ಯಾಂಡ್ ಗ್ರೆನೇಡ್‌ಗಳು, 19 ಸಾವಿರ ಬುಲೆಟ್‌ಗಳು ಸೇರಿವೆ.
ಗುಂಪನ್ನು ನಿಯಂತ್ರಿಸಲು 327 ಸುತ್ತು ಗುಂಡು ಹಾರಿಸಿ, 20 ಅಶ್ರುವಾಯುಗಳನ್ನು ಹಾರಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕೊಳ್ಳೆ ಹೊಡೆಯಲಾಗಿರುವ ಈ ಶಸ್ತ್ರಾಸ್ತಗಳನ್ನು ತಮ್ಮ ಮೇಲೆ ದಾಳಿ ಮಾಡಲು ಉಪಯೋಗಿಸಬಹುದು ಎಂದು ಕುಕಿ ಸಮುದಾಯ ಆತಂಕ ವ್ಯಕ್ತಪಡಿಸಿದೆ.
ಮೇ 3ರಂದು ಮಣಿಪುರದಲ್ಲಿ ಕುಕಿ ಹಾಗೂ ಮೈತೇಯಿ ಸುಮುದಾಯಗಳ ನಡುವೆ ಆರಂಭವಾದ ಹಿಂಸಾಚಾರದಿಂದ ಈವರೆಗೂ 150 ಮಂದಿ ಸಾವಿಗೀಡಾಗಿ ಸುಮಾರು 60 ಸಾವಿರ ಮಂದಿ ನಿರಾಶ್ರಿತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.