ADVERTISEMENT

ಮಣಿಪುರ ಹಿಂಸಾಚಾರ: ಮೌನ ಮುರಿದ ಪ್ರಧಾನಿ ಮೋದಿ

ಪಿಟಿಐ
Published 3 ಜುಲೈ 2024, 15:27 IST
Last Updated 3 ಜುಲೈ 2024, 15:27 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ವಿರುದ್ಧ ರಾಜ್ಯಸಭೆಯಲ್ಲಿ ಬುಧವಾರ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ಕೆಲವು ಶಕ್ತಿಗಳು ಬೆಂಕಿಗೆ ತುಪ್ಪ ಸುರಿಯುತ್ತಿವೆ. ಮಣಿಪುರ ವಿಷಯವನ್ನು ರಾಜಕೀಯಕರಣ ಮಾಡುವುದನ್ನು ಬಿಡಿ. ಒಂದು ದಿನ ಮಣಿಪುರದ ಜನರೇ ನಿಮ್ಮನ್ನು ತಿರಸ್ಕರಿಸಲಿದ್ದಾರೆ’ ಎಂದು ಎಚ್ಚರಿಸಿದರು. ಆ ಮೂಲಕ ಮಣಿಪುರ ಗಲಭೆಯ ವಿಷಯದಲ್ಲಿ ಪ್ರಧಾನಿ ಅವರು ಮೌನ ಮುರಿದರು. 

ಮಣಿಪುರದ ವಿಷಯಕ್ಕೆ ಬಂದಾಗ ಎಲ್ಲ ಪಕ್ಷಗಳು ಪಕ್ಷಾತೀತವಾಗಿ ವರ್ತಿಸಬೇಕು ಹಾಗೂ ಸಂಕಷ್ಟ ಪೀಡಿತ ಜನರಿಗೆ ನೆರವಾಗಬೇಕು ಎಂದ ಅವರು, ‘ಮಣಿಪುರದಲ್ಲಿ ಹಿಂಸಾಚಾರ ನಿರಂತರವಾಗಿ ಇಳಿಮುಖವಾಗುತ್ತಿದ್ದು, ರಾಜ್ಯದ ಬಹುತೇಕ ಭಾಗಗಳಲ್ಲಿ ಉದ್ಯಮಗಳು ಹಾಗೂ ಶಿಕ್ಷಣ ಸಂಸ್ಥೆಗಳು ತೆರೆದಿವೆ. ರಾಜ್ಯದಲ್ಲಿ ಸಂಪೂರ್ಣ ಶಾಂತಿ ನೆಲೆಸುವಂತಾಗಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಕಳೆದ ಒಂದು ವರ್ಷದಲ್ಲಿ ಮಣಿಪುರಕ್ಕೆ ಒಂದು ಸಲವೂ ಭೇಟಿ ನೀಡದ ಪ್ರಧಾನಿ ಅವರನ್ನು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಸದಸ್ಯರು ಟೀಕಿಸಿದ್ದರು. ಪ್ರಧಾನಿ ಭಾಷಣದ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಭಾಷಣದ ಮಧ್ಯದಲ್ಲೇ ಸಭಾತ್ಯಾಗ ಮಾಡಿದರು. 

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ, ‘ಮಣಿಪುರದಲ್ಲಿ 500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. 11 ಸಾವಿರಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಗಲಭೆಯನ್ನು ನಿಯಂತ್ರಿಸಿ, ಸಹಜಸ್ಥಿತಿಗೆ ಮರಳುವಂತೆ ಮಾಡಲು ಕೇಂದ್ರವು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ಮಣಿಪುರವು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಕೇಂದ್ರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಎರಡು ತಂಡಗಳನ್ನು ರಾಜ್ಯಕ್ಕೆ ಕಳುಹಿಸಿದೆ ಎಂದು ವಿವರಿಸಿದರು.

ರಾಜ್ಯಸಭೆಯ ಹಿಂದಿನ ಅಧಿವೇಶನದಲ್ಲಿ ಮಣಿಪುರಕ್ಕೆ ಸಂಬಂಧಿಸಿದ ತಮ್ಮ ವಿಸ್ತೃತ ಭಾಷಣವನ್ನು ನೆನಪಿಸಿಕೊಂಡ ಅವರು, ‘ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸರ್ಕಾರವು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಪುನರುಚ್ಚರಿಸಿದರು.

ಮಣಿಪುರದ ಸಾಮಾಜಿಕ ಸಂಘರ್ಷಕ್ಕೆ ಸುದೀರ್ಘ ಇತಿಹಾಸವಿದೆ. ಜತೆಗೆ ಅದು ಆಳವಾಗಿ ಬೇರೂರಿದೆ. ಸಂಘರ್ಷಮಯ ವಾತಾವರಣದ ಕಾರಣಕ್ಕೆ ಸ್ವಾತಂತ್ರ್ಯ ನಂತರದಲ್ಲಿ 10 ಬಾರಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು ಎಂದು ಸ್ಮರಿಸಿದರು. 1993 ರಿಂದ ಮಣಿಪುರದಲ್ಲಿ ಐದು ವರ್ಷಗಳ ಸುದೀರ್ಘ ಸಾಮಾಜಿಕ ಸಂಘರ್ಷ ನಡೆದ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

ಈ ಪ್ರದೇಶದ ಅಭಿವೃದ್ದಿಗೆ ಸರ್ಕಾರ ಕೈಗೊಂಡ ಉಪಕ್ರಮಗಳ ಮಾಹಿತಿ ನೀಡಿದ ಪ್ರಧಾನಿ, ಈಶಾನ್ಯವು ರಾಷ್ಟ್ರದ ಪ್ರಗತಿಯ ಹೆಬ್ಬಾಗಿಲು ಆಗುತ್ತಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.