ನವದೆಹಲಿ: ಮಣಿಪುರ ಮತ್ತೆ ಉದ್ವಿಗ್ನಗೊಂಡಿದ್ದು, ಹಲವೆಡೆ ಹಿಂಸಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯಕ್ಕೆ ಭೇಟಿ ನೀಡಿ ಪ್ರದೇಶದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಮಣಿಪುರದಲ್ಲಿ ಇತ್ತೀಚಿನ ಹಿಂಸಾತ್ಮಕ ಘಟನೆಗಳು, ರಕ್ತಪಾತವು ಅತ್ಯಂತ ಕಳವಳಕಾರಿಯಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ವಿಭಜನೆ ಹಾಗೂ ನೋವಿನ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ ಪರಿಹಾರ ಕಂಡುಕೊಳ್ಳಬಹುದೆಂದು ಪ್ರತಿಯೊಬ್ಬ ಭಾರತೀಯನ ನಿರೀಕ್ಷೆಯಾಗಿತ್ತು' ಎಂದು ಅವರು ತಿಳಿಸಿದ್ದಾರೆ.
ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪ್ರದೇಶದಲ್ಲಿ ಶಾಂತಿ ನೆಲೆಸಲು ಪ್ರಯತ್ನ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ.
ಜಿರೀಬಾಮ್ ಜಿಲ್ಲೆಯಲ್ಲಿ ನವೆಂಬರ್ 11ರಂದು ನಾಪತ್ತೆಯಾಗಿದ್ದ ಮೈತೇಯಿ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಮೂವರು ಮಹಿಳೆಯರು, ಎಂಟು ತಿಂಗಳ ಒಂದು ಹಾಗೂ ಎರಡೂವರೆ ತಿಂಗಳ ಎರಡು ಶಿಶುಗಳ ಮೃತದೇಹಗಳು ಪತ್ತೆಯಾಗಿವೆ.
ಇದರ ಬೆನ್ನಲ್ಲೇ ಉದ್ರಿಕ್ತ ಜನರು ಮೂವರು ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ಪರಿಣಾಮ ಐದು ಜಿಲ್ಲೆಗಳಲ್ಲಿ ಅನಿರ್ದಿಷ್ಟಾವಧಿಗೆ ನಿಷೇಧಾಜ್ಞೆ ಹೇರಲಾಗಿದ್ದು, ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.