ನವದೆಹಲಿ: ಮಣಿಪುರದಲ್ಲಿ ಕುಕಿ ಅಲ್ಪಸಂಖ್ಯಾತ ಬುಡಕಟ್ಟು ಜನರಿಗೆ ಸೇನಾ ರಕ್ಷಣೆ ಒದಗಿಸಬೇಕು ಎಂದು ಕೋರಿ ಸ್ಥಳೀಯ ಎನ್‌ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈ 3ರಂದು ನಡೆಸಲಿದೆ.
ಈ ಸಮುದಾಯದ ಮೇಲೆ ಹಲ್ಲೆ ನಡೆಸುತ್ತಿರುವ ಕೋಮುವಾದಿ ಗುಂಪುಗಳನ್ನು ಶಿಕ್ಷೆಗೊಳಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ ಎನ್‌ಜಿಒ ‘ಮಣಿಪುರ್ ಟ್ರೈಬಲ್ ಫೋರಂ’ ಮನವಿ ಮಾಡಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ, ಮನೋಜ್ ಮಿಶ್ರಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ರಜೆ ಅವಧಿಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಲು ಜೂನ್ 20ರಂದು ನಿರಾಕರಿಸಿತ್ತು. ‘ಇದು, ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ್ದಾಗಿದೆ. ಸ್ಥಳೀಯ ಆಡಳಿತವೇ ನಿಭಾಯಿಸಬೇಕು’ ಎಂದು ಹೇಳಿತ್ತು.
ಎನ್‌ಜಿಒ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಾಲಿನ್ ಗೊನ್‌ಸಾಲ್ವೆಸ್ ಅವರು, ‘ರಾಜ್ಯದಲ್ಲಿ ಕಂಡುಬಂದಿರುವ ಹಿಂಸಾಚಾರದಿಂದ ಈವರೆಗೆ ಸುಮಾರು 70 ಬುಡಕಟ್ಟು ಜನರು ಮೃತಪಟ್ಟಿದ್ದಾರೆ’ ಎಂದು ಪೀಠದ ಗಮನಕ್ಕೆ ತಂದರು.
ರಾಜ್ಯವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂಬ ಮನವಿಯನ್ನು ವಿರೋಧಿಸಿದರು. ಹಿಂಸೆ ಹತ್ತಿಕ್ಕಲು ಹಾಗೂ ಸಹಜ ಸ್ಥಿತಿಗೆ ತರಲು ಭದ್ರತಾ ಪಡೆಗಳು ಶಕ್ತಿಮೀರಿ ಯತ್ನಿಸುತ್ತಿವೆ ಎಂದು ತಿಳಿಸಿದರು.
ವಕೀಲ ಸತ್ಯಮಿತ್ರ ಅವರ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ ಎನ್‌ಜಿಒ ಮಣಿಪುರ ಟ್ರೈಬಲ್ ಫೋರಂ, ‘ಕೇಂದ್ರದ ಹುಸಿ ಭರವಸೆಗಳ ಮೇಲೆ ವಿಶ್ವಾಸವಿಡದೇ ಕುಕಿ ಸಮುದಾಯಕ್ಕೆ ಸೇನೆಯ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.