ADVERTISEMENT

ಮಣಿಪುರ ಮತ್ತೆ ಉದ್ವಿಗ್ನ: ನಿಷೇಧಾಜ್ಞೆ ಜಾರಿ

ಪಿಟಿಐ
Published 12 ನವೆಂಬರ್ 2024, 4:22 IST
Last Updated 12 ನವೆಂಬರ್ 2024, 4:22 IST
<div class="paragraphs"><p>ಮಣಿಪುರದಲ್ಲಿ ಶಂಕಿತ ಉಗ್ರರಿಗಾಗಿ ಮುಂದುವರಿದ ಶೋಧ</p></div>

ಮಣಿಪುರದಲ್ಲಿ ಶಂಕಿತ ಉಗ್ರರಿಗಾಗಿ ಮುಂದುವರಿದ ಶೋಧ

   

ಪಿಟಿಐ ಚಿತ್ರ

ಇಂಫಾಲ: ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ 11 ಶಂಕಿತ ಉಗ್ರರು ಹತ್ಯೆಯಾದ ಒಂದು ದಿನದ ನಂತರ, ಇಂದು ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಬೆಳಿಗ್ಗೆಯಿಂದ ಪೊಲೀಸರು ಗಸ್ತು ತಿರುಗುತ್ತಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ದಾಳಿಯ ವೇಳೆ, ಶಂಕಿತ ಉಗ್ರರು ಜಕುರಾಧೋರ್‌ನ ಕರೋಂಗ್ ಮಾರುಕಟ್ಟೆಯ ಸುತ್ತಮುತ್ತಲಿನ ಹಲವು ಅಂಗಡಿಗಳು ಮತ್ತು ಮನೆಗಳನ್ನು ಸುಟ್ಟು ಹಾಕಿದ್ದಾರೆ. ಜತೆಗೆ ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಅದರ ಪಕ್ಕದಲ್ಲಿರುವ ಸಿಆರ್‌ಪಿಎಫ್ ಶಿಬಿರಕ್ಕೂ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರಿದಿದ್ದು, ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್ ಮತ್ತು ಪೊಲೀಸರನ್ನೊಳಗೊಂಡ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತ, ಸಿಆರ್‌ಪಿಎಫ್‌ ಸಿಬ್ಬಂದಿಯು ‘ಗ್ರಾಮದ ಸ್ವಯಂಸೇವಕ’ರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿ ಕುಕಿ-ಜೋ ಸಮುದಾಯ ತಮ್ಮ ಪ್ರದೇಶಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದ ಸಂಜೆ 6ರವರೆಗೆ ಬಂದ್‌ಗೆ ಕರೆ ನೀಡಿದೆ.

ಜಕುರಾಧೋರ್‌ನಲ್ಲಿ ನಿಯೋಜಿಸಿರುವ ಸಿಆರ್‌ಪಿಎಫ್‌ ಸಿಬ್ಬಂದಿ ಮತ್ತು ಸಮೀಪದ ಬೋರೊಬೆಕ್ರಾ ಪೊಲೀಸ್ ಠಾಣೆಯ ಮೇಲೆ ಶಸ್ತ್ರಸಜ್ಜಿತ ಉಗ್ರರು ಸೋಮವಾರ ಮಧ್ಯಾಹ್ನ 3ರ ವೇಳೆ ದಾಳಿ ನಡೆಸಿದ್ದಾರೆ. ಸಿಆರ್‌ಪಿಎಫ್‌ ಸಿಬ್ಬಂದಿ ಮತ್ತು ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಸುಮಾರು 45 ನಿಮಿಷ ಗುಂಡಿನ ಚಕಮಕಿ ನಡೆದಿದೆ. ಆ ಬಳಿಕ ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಶೋಧ ನಡೆಸಿದಾಗ 10 ಮೃತದೇಹಗಳು ಹಾಗೂ ಎಕೆ ರೈಫಲ್‌ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ದೊರೆತಿವೆ’ ಎಂದು ಮಣಿಪುರ ಸರ್ಕಾರದ ಪ್ರಕಟಣೆ ತಿಳಿಸಿದೆ.

ಮೈತೇಯಿ ಸಮುದಾಯಕ್ಕೆ ಸೇರಿದವರು ಎನ್ನಲಾದ ಶಸ್ತ್ರಸಜ್ಜಿತ ಗುಂ‍ಪೊಂದು ಕಳೆದ ಶುಕ್ರವಾರ ಹಮರ್‌ ಸಮುದಾಯದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು. ಆ ಬಳಿಕ ಜಿರೀಬಾಮ್‌ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.