ADVERTISEMENT

ಮಣಿಪುರ ಹಿಂಸಾಚಾರ: ಸುಪ್ರೀಂ ಕೋರ್ಟ್‌ಗೆ ಮೂರು ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 23:32 IST
Last Updated 21 ಆಗಸ್ಟ್ 2023, 23:32 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರಕ್ಕೆ ಸಿಲುಕಿ ಆಧಾರ್‌ ಕಾರ್ಡ್‌ ಸೇರಿದಂತೆ ಅಗತ್ಯ ಮೂಲ ದಾಖಲೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಹೊಸದಾಗಿ ದಾಖಲೆ ಪತ್ರ ನೀಡಬೇಕು ಹಾಗೂ ಪರಿಹಾರ ಸೌಲಭ್ಯವನ್ನು ಮೇಲ್ದರ್ಜೆಗೇರಿಸಬೇಕು ಎಂದು ನ್ಯಾಯಮೂರ್ತಿ ಗೀತಾ ಮಿತ್ತಲ್‌ ನೇತೃತ್ವದ ತ್ರಿಸದಸ್ಯ ಸಮಿತಿಯು, ಸೋಮವಾರ ಸುಪ್ರೀಂ ಕೋರ್ಟ್‌ಗೆ ಮೂರು ವರದಿಗಳನ್ನು ಸಲ್ಲಿಸಿದೆ.

ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಣ ಹಿಂಸಾಚಾರದಿಂದ ಕಣಿವೆ ರಾಜ್ಯದಲ್ಲಿ ತತ್ತರಿಸಿರುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯದ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌, ಆಗಸ್ಟ್‌ 7ರಂದು ಈ ಸಮಿತಿ ರಚಿಸಿತ್ತು. ಅಲ್ಲಿನ ಪರಿಹಾರ ಶಿಬಿರಗಳು ಮತ್ತು ಸಂಘರ್ಷ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರ ದೈನಂದಿನ ಸ್ಥಿತಿಗತಿ ಆಲಿಸಿದ ಸಮಿತಿಯು ಈ ವರದಿ ಸಲ್ಲಿಸಿದೆ.  

ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೀತಾ ಮಿತ್ತಲ್‌ ಅವರು ಇದರ ಮುಖ್ಯಸ್ಥೆಯಾಗಿದ್ದು, ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಾಲಿನಿ ಪಿ. ಜೋಷಿ ಮತ್ತು ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆಶಾ ಮೆನನ್‌ ಅವರು ಸಮಿತಿಯ ಉಳಿದ ಸದಸ್ಯರಾಗಿದ್ದಾರೆ.

ADVERTISEMENT

ಜೊತೆಗೆ, ಅಪರಾಧ ಪ್ರಕರಣಗಳ ತನಿಖೆಯ ಮೇಲೆ ಸೂಕ್ತ ನಿಗಾವಹಿಸುವಂತೆ ಮಹಾರಾಷ್ಟ್ರದ ಮಾಜಿ ಪೊಲೀಸ್‌ ಮುಖ್ಯಸ್ಥ ದತ್ತಾತ್ರೇಯ ಪಡಸಾಲ್ಗೀಕರ್‌ ಅವರಿಗೆ ಸುಪ್ರೀಂ ಕೋರ್ಟ್‌ ಕೇಳಿಕೊಂಡಿದೆ.

25ರಂದು ಕಾರ್ಯವಿಧಾನ ಕುರಿತ ಆದೇಶ: ವರದಿ ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ, ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠವು, ‘ಮಿತ್ತಲ್‌ ಸಮಿತಿಯ ಕಾರ್ಯ ವಿಧಾನದ ಬಗ್ಗೆ ಆಗಸ್ಟ್‌ 25ರಂದು ಆದೇಶ ಹೊರಡಿಸಲಾಗುವುದು’ ಎಂದು ತಿಳಿಸಿತು.

ಆಡಳಿತಾತ್ಮಕ ಮನವಿಗಳು, ಸಮಿತಿಯ ಕಾರ್ಯ ಚಟುವಟಿಕೆ ಮತ್ತು ಇತರೇ ಕೆಲಸಗಳಿಗೆ ಅಗತ್ಯವಾದ ಆರ್ಥಿಕ ನೆರವು, ಸಮಿತಿಯ ಸಾರ್ವಜನಿಕ ಕಾರ್ಯದ ಬಗ್ಗೆ ವಿಸ್ತೃತ ಪ್ರಚಾರ ನೀಡುವುದಕ್ಕೆ ಸಂಬಂಧಿಸಿದಂತೆ ವೆಬ್‌ ಪೋರ್ಟಲ್‌ ಸ್ಥಾಪನೆ ಕುರಿತು ಆದೇಶದಲ್ಲಿ ವಿವರಿಸಲಾಗುವುದು ಎಂದು ಹೇಳಿತು. 

‌‌‌‌‌ವರದಿ ಸ್ವೀಕಾರ: ವರದಿಗಳನ್ನು ಸ್ವೀಕರಿಸಿದ ಬಳಿಕ ನ್ಯಾಯಪೀಠವು, ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ವಕೀಲರು, ಕೇಂದ್ರ ಮತ್ತು ಮಣಿಪುರ ಸರ್ಕಾರದ ಪರ ಹಾಜರಾಗುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ವರದಿಯ ಪ್ರತಿಗಳನ್ನು ನೀಡಿತು.

ಸಮಿತಿಯೊಂದಿಗೆ ಚರ್ಚಿಸಿ ಆಗಸ್ಟ್‌ 24ರ ಬೆಳಿಗ್ಗೆ 10ಗಂಟೆಯೊಳಗೆ ಮಣಿಪುರದ ಅಡ್ವೊಕೇಟ್‌ ಜನರಲ್‌ ಅವರಿಗೆ ಈ ಮಾಹಿತಿ ನೀಡುವಂತೆ ವಕೀಲರಾದ ವೃಂದಾ ಗ್ರೋವರ್ ಅವರಿಗೆ ನಿರ್ದೇಶನ ನೀಡಿತು. 

‘ಸಮಿತಿಗೆ ಅಗತ್ಯ ಕಚೇರಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಗೀತಾ ಮಿತ್ತಲ್‌ ಜೊತೆಗೆ ಮಾತುಕತೆ ನಡೆಸುತ್ತೇನೆ’ ಎಂದ ಸಿಜೆಐ ಚಂದ್ರಚೂಡ್‌ ಅವರು, ‘ಸಮಿತಿಯ ಕಾರ್ಯ ನಿರ್ವಹಣೆಗೆ ಯಾವುದೇ ಅಡಚಣೆಯಾಗದಂತೆ ಸೂಕ್ತ ಪ್ರದೇಶದಲ್ಲಿ ಕಚೇರಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದರು. 

ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಮಣಿಪುರದ ನಿವಾಸಿಗಳ ವಿಶ್ವಾಸವನ್ನು ಮರು ಸ್ಥಾಪಿಸುವುದು ಈ ಸಮಿತಿಯ ಹೊಣೆಯಾಗಿದೆ. ಸುಪ್ರೀಂ ಕೋರ್ಟ್‌ಗೆ ನೇರವಾಗಿ ಈ ಸಮಿತಿಯು ವರದಿ ಸಲ್ಲಿಸಲಿದೆ. 

ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿಯೇ ತನಿಖೆ ನಡೆಸಬೇಕು ಎಂಬುದು ಸೇರಿದಂತೆ ಪರಿಹಾರ ಮತ್ತು ಪುನರ್ವಸತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ 10 ಅರ್ಜಿಗಳು ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.