ADVERTISEMENT

Manipur:ನ.7ರಂದು ಕೊಲ್ಲಲ್ಪಟ್ಟ ಮಹಿಳೆಯ ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಅಂಶ

ಪಿಟಿಐ
Published 14 ನವೆಂಬರ್ 2024, 16:52 IST
Last Updated 14 ನವೆಂಬರ್ 2024, 16:52 IST
   

ಗುವಾಹಟಿ: ನವೆಂಬರ್ 7ರಂದು ಮಣಿಪುರದ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಯಲ್ಲಿ ಕೊಲ್ಲಲ್ಪಟ್ಟ 31 ವರ್ಷದ ಬುಡಕಟ್ಟು ಮಹಿಳೆಯ ಶವಪರೀಕ್ಷೆಯ ವರದಿಯಲ್ಲಿ ಆಘಾತಕಾರಿ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಆಕೆಗೆ ಥರ್ಡ್ ಡಿಗ್ರಿ ಚಿತ್ರಹಿಂಸೆಗೆ ನೀಡಲಾಗಿದೆ. ಶೇ 99ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

ನವೆಂಬರ್ 9ರಂದು ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಗಿದೆ. ಮಹಿಳೆಯ ಮೃತದೇಹದ ಭಾಗಗಳು ಮತ್ತು ಅಂಗಗಳು ಕಾಣೆಯಾಗಿವೆ. ರಾಸಾಯನಿಕ ವಿಶ್ಲೇಷಣೆಗಾಗಿ ಒಳಾಂಗಗಳ ಮಾದರಿ ಸಂಗ್ರಹಿಸಲಾಗಲಿಲ್ಲ. ಏಕೆಂದರೆ, ಒಳಾಂಗಗಳು ಸುಟ್ಟುಹೋಗಿದ್ದು, ಗುರುತಿಸಲಾಗಲಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತದ್ದ ಮಿದುಳಿನ ಅಂಗಾಂಶವು ಕೊಳೆತು ನಾರುತ್ತಿತ್ತು ಎಂದೂ ತಿಳಿಸಲಾಗಿದೆ.

ADVERTISEMENT

ನವೆಂಬರ್‌ 7ರಂದು ಶಸ್ತ್ರಧಾರಿ ಉಗ್ರರ ಗುಂಪೊಂದು ನಡೆಸಿದ ದಾಳಿ ಬಳಿಕ ಜೈರಾನ್ ಹಳ್ಳಿಯ ಮನೆಯೊಂದರಲ್ಲಿ 3 ಮಕ್ಕಳ ತಾಯಿಯಾಗಿರುವ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.

'ಉಗ್ರರು ನೀಡಿದ ವಿದ್ಯುತ್ ಶಾಕ್, ಥರ್ಡ್ ಡಿಗ್ರಿ ಹಿಂಸಾಚಾರದಿಂದ ಸಾವು ಸಂಭವಿಸಿದೆ. ದೇಹದ ಶೇ 99ರಷ್ಟು ಭಾಗ ಸುಟ್ಟುಹೋಗಿದೆ’ಎಂದು ವರದಿ ತಿಳಿಸಿದೆ.

ವರದಿಯ ಪ್ರಕಾರ, ಆಸ್ಪತ್ರೆಗೆ ಸುಟ್ಟ ಮೂಳೆಯ ತುಣುಕುಗಳಿದ್ದ ಸಂಪೂರ್ಣವಾಗಿ ಸುಟ್ಟ ಮೃತದೇಹವನ್ನು ರವಾನಿಸಲಾಗಿತ್ತು. ಯಾವುದೇ ಮಾಂಸಖಂಡಗಳು ಉಳಿದಿರಲಿಲ್ಲ ಎಂದೂ ವರದಿ ತಿಳಿಸಿದೆ.

ದೇಹದ ಭಾಗಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಗುರುತಿಸಲು ಸಾಧ್ಯವಾಗದ ಕಾರಣ ಸೂಕ್ಷ್ಮ ವಿಶ್ಲೇಷಣೆಗಾಗಿ ಯೋನಿಯ ಮಾದರಿ ತೆಗೆದುಕೊಳ್ಳಲಾಗಲಿಲ್ಲ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.