ನವದೆಹಲಿ: ಸಿಬಿಐ ಒಳಗಿನ ಕದನ ಸೋಮವಾರ ಹೊಸ ಆಯಾಮಗಳತ್ತ ಹೊರಳಿದೆ. ಕೇಂದ್ರದ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಅವರು ಪ್ರಕರಣವೊಂದನ್ನು ‘ಇತ್ಯರ್ಥ’ಗೊಳಿಸಲು ಕೆಲವು ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಆರೋಪಿಸಲಾಗಿದೆ.
ಅಷ್ಟಲ್ಲದೆ, ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧದ ಆರೋಪಗಳ ತನಿಖೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ಡೊಭಾಲ್ ಅವರು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆಪಾದನೆಯನ್ನೂ ಮಾಡಲಾಗಿದೆ.
ಮುಖ್ಯ ಜಾಗೃತಿ ಆಯುಕ್ತ ಕೆ.ವಿ. ಚೌಧರಿ ಮತ್ತು ಕಾನೂನು ಕಾರ್ಯದರ್ಶಿ ಸುರೇಶ್‌ಚಂದ್ರ ಅವರ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಅಸ್ತಾನಾ ವಿರುದ್ಧದ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಮನೀಶ್ ಕುಮಾರ್ ಸಿನ್ಹಾ ಅವರು ಸುಪ‍್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿದ್ದಾರೆ. ಸಿಬಿಐಯಲ್ಲಿನ ಕಚ್ಚಾಟ ತೀವ್ರಗೊಂಡಾಗ ನಿರ್ದೇಶಕ ಅಲೋಕ್ ವರ್ಮಾ ಮತ್ತು ಅಸ್ತಾನಾ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ ಬಳಿಕ ಸಿನ್ಹಾ ಅವರನ್ನು ವರ್ಗಾಯಿಸಲಾಗಿತ್ತು.
ಅಸ್ತಾನಾ ವಿರುದ್ಧದ ಪ್ರಕರಣದಲ್ಲಿ ದೂರುದಾರರಿಗೆ ಒಂದು ಪಾಠ ಕಲಿಸಬೇಕು ಎಂದು ಸಂಪುಟ ಕಾರ್ಯದರ್ಶಿ ಪಿ.ಕೆ.ಸಿನ್ಹಾ ಬಯಸಿದ್ದರು ಎಂದೂ ದೂರಿನಲ್ಲಿ ಸಿನ್ಹಾ ಅವರು ಹೇಳಿದ್ದಾರೆ.
ಸಿಬಿಐ ಅಧಿಕಾರಿಗಳ ಕೆಲಸದಲ್ಲಿ ಸಿಬ್ಬಂದಿ ಸಚಿವಾಲಯದ ಮೂಲಕ ಹರಿಭಾಯಿ ಹಸ್ತಕ್ಷೇಪ ಮಾಡುತ್ತಿದ್ದರು. ಸಿಬಿಐ ನಿರ್ದೇಶಕರು ಸಿಬ್ಬಂದಿ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುತ್ತಾರೆ.
ಸ್ವತಂತ್ರ ತನಿಖೆಗೆ ಕಾಂಗ್ರೆಸ್ ಆಗ್ರಹ
ಸಿಬಿಐ ಡಿಐಜಿ ಸಿನ್ಹಾ ಅವರು ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಇದು ಪ್ರಧಾನಿ ಕಚೇರಿಯ ಕಾರ್ಯನಿರ್ವಹಣೆಯ ಬಗ್ಗೆಯೇ ಪ್ರಶ್ನೆಗಳನ್ನು ಎತ್ತಿದೆ. ಹಾಗಾಗಿ ಈ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಈ ವಿಚಾರವನ್ನು ಸಂಸತ್ತಿನಲ್ಲಿ ಎತ್ತುವುದಾಗಿಯೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.