ನವದೆಹಲಿ: ರಾಷ್ಟ್ರ ರಾಜಧಾನಿಯ ನಿವಾಸಿಗಳನ್ನು ತಲುಪುವ ಉದ್ದೇಶದಿಂದ ಆಗಸ್ಟ್ 14ರಂದು ಪಾದಯಾತ್ರೆ ನಡೆಸಲು ಆಮ್ ಆದ್ಮಿ ಪಕ್ಷದ ನಾಯಕ ಮನೀಷ್ ಸಿಸೋಡಿಯಾ ಸಜ್ಜಾಗಿದ್ದಾರೆ. ಪ್ರಮುಖ ನಾಯಕರ ಜೊತೆ ಭಾನುವಾರ ಸಭೆ ನಡೆಸಿದ ಅವರು, ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಬಗ್ಗೆ ಚರ್ಚಿಸಿದ್ದಾರೆ.
ಸಚಿವರಾದ ಆತಿಶಿ, ಸೌರಭ್ ಭಾರದ್ವಾಜ್, ಗೋಪಾಲ ರಾಯ್ ಮತ್ತು ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್, ಸಂದೀಪ್ ಪಾಠಕ್ ಸೇರಿದಂತೆ ಹಲವರು ಸಭೆಗೆ ಹಾಜರಾಗಿದ್ದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ (ಸಂಘಟನೆ) ಆಗಿರುವ ಪಾಠಕ್ ಅವರು, ಮುಂಬರುವ ವಿಧಾನಸಭೆ ಚುನಾವಣೆ ಹಾಗೂ ದೆಹಲಿಯ ಸದ್ಯದ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಾಗಿದೆ ಎಂದಿದ್ದಾರೆ.
'ಸಿಸೋಡಿಯಾ ಅವರು ಪಕ್ಷದ ಶಾಸಕರೊಂದಿಗೆ ಸೋಮವಾರ, ಕೌನ್ಸಿಲರ್‌ಗಳೊಂದಿಗೆ ಮಂಗಳವಾರ ಸಭೆ ನಡೆಸಲಿದ್ದಾರೆ. ದೆಹಲಿಯ ನಾಗರಿಕರನ್ನು ಭೇಟಿಯಾಗುವ ಸಲುವಾಗಿ ಆಗಸ್ಟ್ 14ರಂದು ಆರಂಭಿಸಲಾಗುವುದು' ಎಂದು ತಿಳಿಸಿದ್ದಾರೆ.
'ನಮ್ಮ ಕೆಲಸಗಳನ್ನು ತಡೆಯುವುದು ಅಥವಾ ಪಕ್ಷವನ್ನು ಒಡೆಯುವುದೊಂದೇ ಬಿಜೆಪಿಯ ಅಜೆಂಡಾ ಎಂಬುದು ದೇಶದ ಜನರಿಗೆ ಸ್ಪಷ್ಟವಾಗಿದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಎಎಪಿ ಬಲವಾಗಿ ನಿಂತಿದೆ. ಉತ್ತಮ ಕಾರ್ಯಗಳನ್ನು ಮುಂದುವರಿಸಿದೆ' ಎಂದಿದ್ದಾರೆ.
ಎಎಪಿ ಇತರ ರಾಜ್ಯಗಳಲ್ಲಿಯೂ ನೆಲೆ ವಿಸ್ತರಿಸಿಕೊಳ್ಳುತ್ತಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಆಪ್ತ ಹಾಗೂ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಶುಕ್ರವಾರವಷ್ಟೇ ಜೈಲಿನಿಂದ ಹೊರಬಂದಿದ್ದಾರೆ.
ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ಮದ್ಯ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರು ಕಳೆದ 17 ತಿಂಗಳಿನಿಂದ ಜೈಲಿನಲ್ಲಿದ್ದರು.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.