ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳ ಆಧುನೀಕರಣಕ್ಕೆ ಮನೀಶ್ ಸಿಸೋಡಿಯಾ ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.
ಪ್ರತಿ ದಿನ ಮುಂಜಾನೆ ಆರು ಗಂಟೆಗೆ ಎದ್ದು ತಪಾಸಣೆಗೆ ತೆರಳುವ ಸಿಸೋಡಿಯಾ ಅವರಿಂದಲೇ ಕಳೆದ ಎಂಟು ವರ್ಷಗಳಲ್ಲಿ ದೆಹಲಿ ಸರ್ಕಾರಿ ಶಾಲೆಗಳು ಬದಲಾವಣೆಯಾಗಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಪೂರ್ವ ವಿನೋದ್ ನಗರದಲ್ಲಿ ರಾಜ್‌ಕೀಯ ಸರ್ವೋದಯ ಕನ್ಯಾ ಬಾಲ ವಿದ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಶಾಲೆ ಸಂಪೂರ್ಣ ನಿರ್ಮಾಣವಾದ ಬಳಿಕ ಕೊಲಂಬಿಯಾ ವಿಶ್ವವಿದ್ಯಾಲಯದಂತೆ ಕಾಣಲಿದೆ ಎಂದು ಹೇಳಿದರು.
ಭ್ರಷ್ಟಾಚಾರದ ಆರೋಪದಲ್ಲಿ ಕೇಂದ್ರವು ಸಿಸೋಡಿಯಾ ಅವರನ್ನು ಜೈಲಿಗೆ ಅಟ್ಟಿದೆ. ಆದರೆ ಪ್ರತಿ ದಿನ ಬೆಳಗ್ಗೆ ಎದ್ದು ಶಾಲೆಗಳಿಗೆ ಭೇಟಿ ನೀಡುತ್ತಿದ್ದ ನಾಯಕರು ಅವರಾಗಿದ್ದಾರೆ. ಭ್ರಷ್ಟ ನಾಯಕರಾಗಿದ್ದರೆ ಹಾಗೇ ಮಾಡುತ್ತಿರಲಿಲ್ಲ ಎಂದು ಹೇಳಿದರು.
ದೆಹಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ವೈದ್ಯರು, ಎಂಜಿನಿಯರ್ ಮತ್ತು ಪೊಲೀಸ್ ಅಧಿಕಾರಿಗಳಂತಹ ಉನ್ನತ ಪದವಿ ಹೊಂದುತ್ತಿದ್ದಾರೆ. ಈ ಶಿಕ್ಷಣ ಬದಲಾವಣೆಯ ಹಿಂದೆ ಓರ್ವ ವ್ಯಕ್ತಿ ಇದ್ದು, ಅವರೇ ಮನೀಶ್ ಸಿಸೋಡಿಯಾ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.