ಜೈಪುರ: ‘ಆ ರಾತ್ರಿ ನನ್ನ ಬದುಕಿನ ಅತ್ಯಂತ ಸುದೀರ್ಘ ರಾತ್ರಿಯಾಗಿತ್ತು; ಅಸಹನೀಯ ಒಂಟಿತನದ ರಾತ್ರಿಯಾಗಿತ್ತು. ಅಂದು ನನ್ನ ರೆಪ್ಪೆಗಳನ್ನು ಕ್ಷಣಕಾಲವೂ ಮುಚ್ಚಲಿಲ್ಲ’ – ಬಾಲಿವುಡ್ ನಟಿ ಮನೀಷಾ ಕೋಯಿರಾಲಾ ಹೀಗೆ ಹೇಳುತ್ತಿದ್ದರೆ ಕೇಳುತ್ತಿದ್ದವರ ಕಣ್ಣುಗಳಲ್ಲಿಯೂ ಪಸೆಯಾಡಿತು.
ಜೈಪುರ ಸಾಹಿತ್ಯೋತ್ಸವದಲ್ಲಿ ಪಾಲ್ಗೊಂಡ ಅವರು, ತಮಗೆ ಕ್ಯಾನ್ಸರ್ ಇದೆ ಎಂದು ತಿಳಿದ ದಿನದ ನೋವಿನ ಗಳಿಗೆಯನ್ನು ಹೀಗೆ ನೆನಪಿಸಿಕೊಂಡರು. ಕ್ಯಾನ್ಸರ್ ವಿರುದ್ಧ ಹೋರಾಡಿ ಗುಣಮುಖರಾದ ತಮ್ಮ ಸ್ಪೂರ್ತಿಕಥನವನ್ನು ಅವರು ಸಂಜಯ್ ರಾಯ್ ಅವರ ಜತೆಗಿನ ಮಾತುಕತೆಯಲ್ಲಿ ಹಂಚಿಕೊಂಡರು.
‘ನನಗೆ ಕ್ಯಾನ್ಸರ್ ಇದೆ ಎಂದು ಮೊದಲು ತಿಳಿದಿದ್ದು ಕಠ್ಮಂಡುವಿನ ಆಸ್ಪತ್ರೆಯಲ್ಲಿ. ಆಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಅಲ್ಲಿನ ಡಾಕ್ಟರ್ ಸಲಹೆಯ ಮೇರೆಗೆ ಮುಂಬೈನಲ್ಲಿ ವೈದ್ಯರನ್ನು ಸಂಪರ್ಕಿಸಲು ನಿರ್ಧರಿಸಿದೆ. ಕಂಠ್ಮಂಡುವಿನಿಂದ ಮುಂಬೈ ವಿಮಾನದಲ್ಲಿ ಸುಮಾರು ಎರಡು ತಾಸಿನ ಪ್ರಯಾಣವಷ್ಟೆ. ಆದರೆ ಅದು ನನ್ನ ಬದುಕಿನ ಅತ್ಯಂತ ಸುದೀರ್ಘ ಪ್ರಯಾಣದಂತೆ ಭಾಸವಾಗಿತ್ತು. ಎಲ್ಲರೂ ನನ್ನನ್ನು ಅನುಕಂಪದಿಂದ ನೋಡುತ್ತಿದ್ದಾರೆ ಅನಿಸುತ್ತಿತ್ತು. ಈಗ ಬಂದಿರುವ ವೈದ್ಯಕೀಯ ವರದಿ ಸುಳ್ಳು; ವೈದ್ಯರಿಗೇ ತಪ್ಪು ಗ್ರಹಿಕೆ ಆಗಿರಬೇಕು ಅಂದುಕೊಂಡೆ. ಹಾಗೆಯೇ ಆಗಲಿ ಎಂದು ದೇವರನ್ನು ಬೇಡಿಕೊಂಡೆ. ಆದರೆ ಆ ಪ್ರಾರ್ಥನೆ ಫಲಕೊಡಲಿಲ್ಲ. ಮುಂಬೈನ ವೈದ್ಯರೂ ನನಗೆ ಕ್ಯಾನ್ಸರ್ ಇರುವುದನ್ನು ಖಚಿತಪಡಿಸಿದರು’ ಎಂದು ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಆಘಾತದ ದಿನಗಳನ್ನು ಅವರು ನೆನಪಿಸಿಕೊಂಡರು.
ಐ ಡೋಂಟ್ ವಾಂಟ್ ಟು ಡೈ:
ತಾವು ಹಾದು ಬಂದ ನೋವಿನ ಕಥನವನ್ನು ವಿವರಿಸುತ್ತಲೇ ಅಂಥ ಸಂದರ್ಭದಲ್ಲಿ ಮಾನಸಿಕವಾಗಿ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕಾದ ಅಗತ್ಯದ ಕುರಿತೂ ಒತ್ತಿ ಹೇಳಿದರು. ‘ಇಂಥ ಸಂದರ್ಭದಲ್ಲಿ ಆಘಾತವಾಗುವುದು ಸಹಜ. ಆಗ ನಮ್ಮೆದುರು ಎರಡು ಆಯ್ಕೆಗಳಿರುತ್ತವೆ. ಒಂದು ಈ ಸಮಸ್ಯೆಗೆ ಪೂರ್ತಿ ಶರಣಾಗಿ ನಿರಾಶರಾಗುವುದು. ಇನ್ನೊಂದು ಆ ನೋವು, ಖಿನ್ನತೆ, ಆಘಾತಗಳನ್ನು ಅನುಭವಿಸುತ್ತಲೇ ಅವುಗಳು ನಮ್ಮನ್ನು ಆಳದಂತೆ ಎಚ್ಚರವಹಿಸುವುದು. ನಮ್ಮ ಜೀವನೋತ್ಸಾಹವನ್ನು ಮೀರಿ ಅವು ಬೆಳೆಯದಂತೆ ನೋಡಿಕೊಳ್ಳುವುದು. ಸಂಕಷ್ಟದ ಪರಿಸ್ಥಿತಿಯನ್ನು ಒಂದು ಸವಾಲಾಗಿ ಸ್ವೀಕರಿಸುವುದು. ನಾನು ಎರಡನೆಯದ್ದನ್ನು ಆಯ್ದುಕೊಂಡೆ’ ಎಂದು ವಿವರಿಸಿದರು.
ಕಾಯಿಲೆ ಕುರಿತು ಅರಿತುಕೊಳ್ಳಿ:
‘ಇಂಥ ಸನ್ನಿವೇಶಗಳು ಎದುರಾದಾಗ ಎಲ್ಲಕ್ಕಿಂತ ಮೊದಲು ಆ ಕಾಯಿಲೆ ಬಗ್ಗೆ ನಾವು ಸರಿಯಾಗಿ ತಿಳಿದುಕೊಳ್ಳಬೇಕು. ಮುಂದೆ ನಾವು ಹಾಯಬೇಕಾದ ದಾರಿಯ ಕುರಿತು ಸರಿಯಾದ ತಿಳಿವಳಿಕೆ ಬಂದರೆ ಅದರ ಕುರಿತು ಭಯವೂ ಅಷ್ಟರಮಟ್ಟಿಗೆ ಕಡಿಮೆಯಾಗುತ್ತದೆ’ ಎಂದು ಅವರು ಸಲಹೆ ನೀಡಿದರು.
ಇದನ್ನೂ ಓದಿ...
ಮನುಷ್ಯ ವಿಕಾಸವೆಂಬುದು ಹಾವು ಏಣಿ ಆಟ: ಜಯಂತ ಕಾಯ್ಕಿಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.