ಚಂಡೀಗಡ: ‘ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ತನಿಖೆಗೆ ಹೈಕೋರ್ಟ್‌ನಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ನ್ಯಾಯಾಂಗ ಆಯೋಗ ರಚಿಸಲಾಗುವುದು’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೋಮವಾರ ಪ್ರಕಟಿಸಿದ್ದಾರೆ.
ಮೂಸೆವಾಲಾ ಅವರ ತಂದೆ ಬಲ್‌ಕೌರ್ ಸಿಂಗ್ ಅವರು, ‘ತಮ್ಮ ಮಗನ ಹತ್ಯೆಯ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು. ಸಿಬಿಐ ಮತ್ತು ಎನ್‌ಐಎ ಕೂಡ ತನಿಖೆಯಲ್ಲಿ ಭಾಗಿಯಾಗಬೇಕು’ ಎಂದು ಮಾನ್ ಅವರಿಗೆ ಪತ್ರ ಬರೆದಿದರು. ಇದಾದ ಬಳಿಕ ಮಾನ್ ನ್ಯಾಯಾಂಗ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.
‘ನನ್ನ ಮಗನ ಭದ್ರತೆಯನ್ನು ಪರಿಶೀಲಿಸಿದ ಮತ್ತು ಭದ್ರತಾ ವ್ಯವಸ್ಥೆಯನ್ನು ಹಿಂಪಡೆದ ಅಧಿಕಾರಿಗಳ ಕ್ರಮವನ್ನು ಪರಿಶೀಲಿಸಬೇಕು. ನನ್ನ ಮಗ ಎಲ್ಲಿದ್ದಾನೆ ಮತ್ತು ಅವನು ಯಾವಾಗ ಹಿಂತಿರುಗುತ್ತಾನೆ ಎಂದು ಸಿಧು ಅವರ ತಾಯಿ ಕೇಳುತ್ತಿದ್ದಾರೆ. ನಾನು ಏನು ಉತ್ತರ ನೀಡಲಿ?’ ನನಗೆ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಕುಟುಂಬದವರು ಸಿಧುವಿನ ಶವದ ಮರಣೋತ್ತರ ಪರೀಕ್ಷೆಗೆ ಒಪ್ಪುತ್ತಿಲ್ಲ’ ಎಂದೂ ಬಲ್‌ಕೌರ್ ಸಿಂಗ್ ಪತ್ರದಲ್ಲಿ ಬರೆದಿದ್ದಾರೆ.
ಮೂಸೆವಾಲಾ ಹತ್ಯೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಮಾನ್ ಅವರು, ‘ಪಂಜಾಬ್ ಸರ್ಕಾರವು ನ್ಯಾಯಾಂಗ ತನಿಖೆಗಾಗಿ ಆಯೋಗ ರಚಿಸಿದ್ದು, ಎನ್‌ಐಎ ಸೇರಿದಂತೆ ಕೇಂದ್ರದ ಯಾವುದೇ ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.